-->
 ಮಹಿಳೆಯ ಮಾರ್ಫ್‌ ಚಿತ್ರ ಪ್ರಕರಣ: ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನೋಟಿಸ್

ಮಹಿಳೆಯ ಮಾರ್ಫ್‌ ಚಿತ್ರ ಪ್ರಕರಣ: ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನೋಟಿಸ್


ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಹಿಳೆಯೊಬ್ಬರ ಫೋಟೋವನ್ನು ಕೃತಕ ಬುದ್ಧಿಮತ್ತೆ (AI) ಹಾಗೂ ಫೇಸ್‌ಸ್ವಾಪ್ ತಂತ್ರಜ್ಞಾನ ಬಳಸಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ನಾಯಕರಾದ ಸೌರವ್ ದಾಸ್, ಅಭಿಜಿತ್ ದಿಪ್ಕೆ, ಅಶುತೋಷ್ ರಾಂಕಾ ಹಾಗೂ ರತ್ನ ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತನ್ನ ಮುಖವನ್ನು ಮಾರ್ಫ್ ಮಾಡಿ ಅಸಭ್ಯ ರೀತಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ಆರೋಪಿಸಿ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಮಾರ್ಫ್ ಮಾಡಿದ ಚಿತ್ರಗಳನ್ನು ಪ್ರತಿಭಟನಾ ಸ್ಥಳದಲ್ಲಿ ಬೃಹತ್ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳಲ್ಲಿ ಬಳಸಲಾಗಿದ್ದು, ಬಳಿಕ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಅವರು ಆರೋಪಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಿರೀಶ್ ಕತ್ಪಾಲಿಯಾ ಅವರ ಪೀಠವು, ಮಹಿಳೆಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರಗಳು ಹಾಗೂ ಲಿಂಕ್‌ಗಳನ್ನು ತನ್ನ ಎಲ್ಲಾ ವೇದಿಕೆಗಳಿಂದ 24 ಗಂಟೆಗಳೊಳಗೆ ತೆಗೆದುಹಾಕುವಂತೆ ಮೆಟಾಗೆ ನಿರ್ದೇಶನ ನೀಡಿತು. ಅಲ್ಲದೆ, ಮಹಿಳೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತು.

ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಎರಡು ವಾರಗಳೊಳಗೆ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ. ವಿಚಾರಣೆ ವೇಳೆ ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಗಿರೀಶ್ ಕತ್ಪಾಲಿಯಾ, ಇದು ಅತ್ಯಂತ ಅಸಾಮಾನ್ಯ ಪ್ರಕರಣವಾಗಿದ್ದು, ವಿಷಯವು ಒಬ್ಬ ಮಹಿಳೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಮಹಿಳೆ ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಸೇರಿದಂತೆ ಕೆಲವರ ವಿರುದ್ಧ ನಿರ್ದಿಷ್ಟವಾಗಿ ದೂರು ನೀಡಿದ್ದರೂ, ದೆಹಲಿ ಪೊಲೀಸರು ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಿದ್ದರು. ನಾಯಕರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸದಿರುವುದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. 

Ads on article

Advertise in articles 1

advertising articles 2

Advertise under the article