-->
 ಮೈಸೂರು ದಸರಾ ದರ್ಬಾರಿನಲ್ಲಿ ಕರಾವಳಿಯ ಕಂಬಳದ ವೈಭವ

ಮೈಸೂರು ದಸರಾ ದರ್ಬಾರಿನಲ್ಲಿ ಕರಾವಳಿಯ ಕಂಬಳದ ವೈಭವ


ಮೈಸೂರು ದಸರಾ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ವೈಭವ ಅನಾವರಣಗೊಳ್ಳಲಿದೆ. ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಅದ್ಧೂರಿ ಕಂಬಳ ನಡೆಯಲಿದ್ದು, 20 ಎಕರೆ ಪ್ರದೇಶದಲ್ಲಿ ಕಂಬಳದ ಕರೆ ನಿರ್ಮಿಸಲಾಗಿದೆ. ಸುಮಾರು 15 ಸಾವಿರ ಪ್ರೇಕ್ಷಕರಿಗೆ ವೀಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದೆ.

ಕಂಬಳದಲ್ಲಿ ಸುಮಾರು 160 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ಕೋಣಗಳ ಯಜಮಾನರ ಮನೆಗಳಿಗೆ ತೆರಳಿ ನೋಂದಣಿ ಮಾಡಲಾಗಿದೆ. ಅಕ್ಟೋಬರ್ 10ರಂದು ಐದು ಜೊತೆ ಕೋಣಗಳ ಟ್ರಯಲ್ ಓಟ ನಡೆಯಲಿದೆ. 147 ಮೀಟರ್ ಉದ್ದದ ಕಂಬಳದ ಕರೆ ಸಿದ್ಧಗೊಂಡಿದೆ.

ಅಕ್ಟೋಬರ್ 16ರಂದು ಬೆಳಗ್ಗೆ ಮಂಗಳೂರಿನಿಂದ ಕೋಣಗಳು ಮೈಸೂರಿನತ್ತ ಪ್ರಯಾಣಿಸಲಿದ್ದು, ಮಡಿಕೇರಿಯಲ್ಲಿ ವಿಶ್ರಾಂತಿ ಬಳಿಕ ರಾತ್ರಿ ಮೈಸೂರು ತಲುಪಲಿವೆ. ಅಕ್ಟೋಬರ್ 17ರಂದು ಕೋಣಗಳಿಗೆ ವಿಶ್ರಾಂತಿ ನೀಡಿ, 18ರಂದು ಕಂಬಳ ಆರಂಭವಾಗಲಿದೆ. 19ರಂದು ಬಹುಮಾನ ವಿತರಣೆ ನಡೆಯಲಿದೆ.

ದೊಡ್ಡ ಕೋಣಗಳ ವಿಭಾಗದ ಪ್ರಥಮ ಬಹುಮಾನ 65 ಸಾವಿರ, ಚಿಕ್ಕ ಕೋಣಗಳ ವಿಭಾಗದಲ್ಲಿ 50 ಸಾವಿರ ಹಾಗೂ ಮೈಸೂರು ದಸರಾ ಪ್ರಶಸ್ತಿ ಫಲಕ ನೀಡಲಾಗುತ್ತದೆ. ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 16 ಗ್ರಾಂ, ದ್ವಿತೀಯಕ್ಕೆ 8 ಗ್ರಾಂ ಹಾಗೂ ಮೂರನೇ ಮತ್ತು ನಾಲ್ಕನೇ ಬಹುಮಾನವಾಗಿ ತಲಾ ಒಂದು ಪವನ್ ಚಿನ್ನ ನೀಡಲಾಗುತ್ತದೆ. ಜೂನಿಯರ್ ವಿಭಾಗದ ವಿಜೇತರಿಗೆ 8 ಗ್ರಾಂ ಮತ್ತು 5 ಗ್ರಾಂ ಚಿನ್ನದ ಬಹುಮಾನವಿದೆ.

ಕಂಬಳ ವೀಕ್ಷಣೆಗೆ ಉಚಿತ ಪಾಸ್ ವ್ಯವಸ್ಥೆ ಇದ್ದು, ಪಾಸ್ ಇಲ್ಲದೆಯೂ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ವಿಐಪಿ, ವಿವಿಐಪಿ ಪಾಸ್‌ಗಳ ಜೊತೆಗೆ ಕೋಣಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ ವ್ಯವಸ್ಥೆಯೂ ಇರಲಿದೆ. ಕೋಣಗಳಿಗೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಕರಾವಳಿಯ ಸಾಂಪ್ರದಾಯಿಕ ಆಹಾರಗಳ ಫುಡ್ ಫೆಸ್ಟಿವಲ್ ಕೂಡ ಆಯೋಜಿಸಲಾಗಿದೆ.

ಮೈಸೂರು ದಸರಾ ಸಂಭ್ರಮಕ್ಕೆ ಕರಾವಳಿಯ ಕಂಬಳದ ಸೊಬಗು ಸೇರ್ಪಡೆಯಾಗುತ್ತಿದ್ದು, ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯೊಂದಿಗೆ ಅದ್ಧೂರಿ ಸಿದ್ಧತೆಗಳು ನಡೆಯುತ್ತಿವೆ.

Ads on article

Advertise in articles 1

advertising articles 2

Advertise under the article