ಪ್ರಧಾನಿ ಮೋದಿಗೆ ಯಕ್ಷಗಾನ ರಾಜಕಿರೀಟ ತೊಡಿಸಿ ಸನ್ಮಾನಿಸಿದ ಪೇಜಾವರ ಶ್ರೀ
ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಐತಿಹಾಸಿಕ ಇಂದ್ರಪ್ರಸ್ಥ ಚಾತುರ್ಮಾಸ್ಯ ವ್ರತ ಸಮಾಪ್ತಿಗೆ ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿ, ಮಂಗಳವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಪ್ರಧಾನಿ ಮೋದಿ ಅವರು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಮಾನೋತ್ಸವವನ್ನು 2031ರಲ್ಲಿ ಆಚರಿಸುವ ಹಿನ್ನೆಲೆಯಲ್ಲಿ ಪೇಜಾವರ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪಂಚವಾರ್ಷಿಕ ಯೋಜನೆಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು.
ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಧಾನಮಂತ್ರಿಯವರಿಗೆ ಯಕ್ಷಗಾನದ ರಾಜಕಿರೀಟ ತೊಡಿಸಿ, ಶಾಲು ಹೊದಿಸಿ, ಸ್ವರ್ಣಲೇಪಿತ ಕಾಲೀಯ ಕೃಷ್ಣನ ಪ್ರತಿಮೆ, ಫಲ ಹಾಗೂ ಮಂತ್ರಾಕ್ಷತೆಯನ್ನು ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ವೇದವ್ಯಾಸ ಗುರುಕುಲದಲ್ಲಿ ಅವರ ಹೆಸರು, ಗೋತ್ರ, ನಕ್ಷತ್ರ ಹಾಗೂ ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ಪೂರ್ಣ ನವಗ್ರಹ ಹೋಮ ಹಾಗೂ ರಾಷ್ಟ್ರಸೂಕ್ತ ಹೋಮ ನಡೆಸಲಾಗಿತ್ತು. ಅದರ ಪ್ರಸಾದವನ್ನು ಪ್ರಧಾನಿಯವರಿಗೆ ನೀಡಿ ಶ್ರೀಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಇಂದ್ರಪ್ರಸ್ಥದಲ್ಲಿ ನಡೆಸಿದ ಚಾತುರ್ಮಾಸ್ಯ ವ್ರತ ಅತ್ಯಂತ ಸಂತೋಷ ತಂದಿದೆ. ದೆಹಲಿಯಲ್ಲಿ ಕುಳಿತು ದೇಶ ಮತ್ತು ಧರ್ಮದ ಒಳಿತಿಗಾಗಿ ಹೋಮ, ಹವನ, ಸತ್ಸಂಗ, ಜಪಯಜ್ಞ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿರುವುದು ಸಂತಸ ತಂದಿದೆ ಎಂದರು.
ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಾಬ್ದಿಯ ಪಂಚವಾರ್ಷಿಕ ಯೋಜನೆಯ ಲಾಂಛನವನ್ನು ಪ್ರಧಾನಿಯವರಿಂದ ಅನಾವರಣಗೊಳಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.
ದೇಶ ಮತ್ತು ಧರ್ಮದ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಭಾರತ ಹಾಗೂ ಭಾರತೀಯರ ಗೌರವವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಅವರು ಇನ್ನೂ ಬಹುಕಾಲ ಯಶಸ್ವಿಯಾಗಿ ದೇಶವನ್ನು ಮುನ್ನಡೆಸುವಂತಾಗಲಿ ಎಂದು ಶ್ರೀಗಳು ಹಾರೈಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣಾದಾಯಕವಾಗಿವೆ ಎಂದರು. ಉಡುಪಿ ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿದ ಅವರು, ಶ್ರೀ ವಿಶ್ವೇಶತೀರ್ಥರ ಜನ್ಮಶತಾಬ್ದಿ ಯೋಜನೆಗಳು ಯಶಸ್ವಿಯಾಗಿ ಸಮಾಜ ಹಾಗೂ ದೇಶಕ್ಕೆ ಮತ್ತಷ್ಟು ಬಲ ನೀಡಲಿ ಎಂದು ಹಾರೈಸಿದರು.
ಉಡುಪಿ ಮತ್ತು ದ್ವಾರಕೆಯ ನಡುವೆ ಬಹಳ ಗಾಢವಾದ ಸಂಬಂಧವಿದೆ. ಹೀಗಾಗಿ ಶ್ರೀ ವಿಶ್ವೇಶತೀರ್ಥರ ಜನ್ಮಶತಾಬ್ದಿ ಯೋಜನೆಯಲ್ಲಿ ದ್ವಾರಕೆಯನ್ನೂ ಒಳಗೊಂಡಂತೆ ಕಾರ್ಯಕ್ರಮವೊಂದನ್ನು ರೂಪಿಸುವಂತೆ ಪ್ರಧಾನಿ ಮೋದಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ಚೆನ್ನೈ ಉಡುಪಿ ಹೋಮ್ಸ್ ಮಾಲಕ ಪಿ. ರಾಮ್ ಪ್ರಸಾದ್, ಎಂಆರ್‌ಜಿ ಗ್ರೂಪ್ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ, ಕೊಯಮತ್ತೂರಿನ ಉದ್ಯಮಿ ರವಿ ಶ್ಯಾಮ್, ನವದೆಹಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಬೆಂಗಳೂರಿನ ಕೈಗಾರಿಕೋದ್ಯಮಿ ಹರೀಶ್ ರಾಯಸ್, ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಚ್. ವಾಸುದೇವ ಭಟ್, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್ ಮೈಸೂರು, ಟಿ.ಪಿ. ಅನಂತ್ ಬೆಂಗಳೂರು, ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಹಾಗೂ ಶ್ರೀಗಳ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಪೇಜಾವರ ಮಠದ ಪಿಆರ್‌ಒ ವಾಸುದೇವ ಭಟ್ ಪೆರಂಪಳ್ಳಿ ಅವರು ಉಪಸ್ಥಿತರಿದ್ದ ಗಣ್ಯರನ್ನು ಪ್ರಧಾನಿಯವರಿಗೆ ಪರಿಚಯಿಸಿ, ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದರು. ಶ್ರೀಗಳ ಮಾರ್ಗದರ್ಶನದಲ್ಲಿ ವಾಸುದೇವ ಭಟ್ ಅವರು ಲಾಂಛನವನ್ನು ವಿನ್ಯಾಸಗೊಳಿಸಿದ್ದು, ಉಡುಪಿಯ ನಿಧಿಗ್ರಾಫಿಟೆಕ್‌ನ ಮುರಳಿಕೃಷ್ಣ ರಾವ್ ಅವರು ಅದನ್ನು ಕೃತಿಗಿಳಿಸಿದ್ದಾರೆ.

