ಬಾಲ್ಕನಿ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು: ಕಟ್ಟಡ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ
ಮಂಗಳೂರು ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಶನ್ ಹಾಲ್‌ನಲ್ಲಿ ಬಾಲ್ಕನಿಯ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶಮ್ಮಾಝ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಹಾಲ್‌ನ ಮಾಲೀಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮದ ಸಂಘಟಕ ದಿನಕರ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರ ಹುದ್ದೆಗಳ ಆಯ್ಕೆ ಕುರಿತ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಹಾಲ್‌ಗೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 2.50ರ ವೇಳೆಗೆ ಮೊದಲ ಮಹಡಿಯ ಪ್ಯಾಸೇಜ್‌ನಲ್ಲಿ ವಿದ್ಯಾರ್ಥಿಗಳು ಗುಂಪಾಗಿ ಕಾರ್ಯಕ್ರಮದ ರ್ಯಾಲಿಯನ್ನು ವೀಕ್ಷಿಸುತ್ತಿದ್ದ ವೇಳೆ ಬಾಲ್ಕನಿಯ ತಡೆಗೋಡೆ ಏಕಾಏಕಿ ಕುಸಿದು ಕೆಳಗೆ ನಿಂತಿದ್ದ ಶಮ್ಮಾಝ್ ಅವರ ಮೇಲೆ ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಲ್ಲಿ ಶಮ್ಮಾಝ್ ಅವರ ತಲೆ, ಎರಡೂ ಕಾಲು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಮೊಹಮ್ಮದ್ ಸನಾನ್ ಅಹ್ಮದ್, ಮೊಹಮ್ಮದ್ ಹನೀಫ್ ಹಾಗೂ ದಾವೂದ್ ಎಂಬ ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ವಿದ್ಯಾರ್ಥಿಗಳು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಶಮ್ಮಾಝ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾವಸ್ಥೆಯಲ್ಲಿದ್ದ ಅವರು ರಾತ್ರಿ ಸುಮಾರು 11.33ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂಬುದು ತಿಳಿದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅವಕಾಶ ನೀಡಲಾಗಿದೆ ಎಂದು ಕಟ್ಟಡ ಮಾಲೀಕರ ವಿರುದ್ಧ ಆರೋಪಿಸಲಾಗಿದೆ. ಅಲ್ಲದೆ, ಕಟ್ಟಡದ ಸ್ಥಿತಿಗತಿ ತಿಳಿದಿದ್ದರೂ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡದೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರ ವಿರುದ್ಧವೂ ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.