ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ರಂಗಕರ್ಮಿ ರವಿರಾಜ್ ಎಚ್.ಪಿ. ಆಯ್ಕೆ
ರಂಗಭೂಮಿ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ರಂಗಕರ್ಮಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಅವರನ್ನು ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ತಿಳಿಸಿದ್ದಾರೆ.
ರವಿರಾಜ್ ಎಚ್.ಪಿ. ಅವರು ಹಿರಿಯ ರಂಗ ನಿರ್ದೇಶಕರಾದ ಪ್ರಸನ್ನ ಹೆಗ್ಗೋಡು, ಚಿದಂಬರರಾವ್ ಜಂಬೆ, ಜೀವನ್ ರಾಮ್ ಸುಳ್ಯ, ಗುರುರಾಜ್ ಮಾರ್ಪಳ್ಳಿ, ಶ್ರೀನಿವಾಸ್ ಪ್ರಭು, ಮಂಡ್ಯ ರಮೇಶ್, ಮಾಲತೇಶ್ ಬಡಿಗೇರ, ರಾಮದಾಸ್, ಆನಂದ ಗಾಣಿಗ ಹಾಗೂ ಬಾಸುಮ ಕೊಡಗು ಸೇರಿದಂತೆ ಹಲವು ರಂಗತಜ್ಞರಿಂದ ರಂಗ ಶಿಕ್ಷಣ ಪಡೆದಿದ್ದಾರೆ.
ನಟನಾಗಿ ಲಚ್ಚಿ, ಶಾರದಾ, ಪ್ರಾಣ ಹೋದರೂ ಮಾನಬೇಕು, ಸ್ವಪ್ನಲೋಕ, ಸಿರಿ ಸಂಪಿಗೆ, ಸೂರ್ಯ ಶಿಕಾರಿ, ಗಾಂಧಿನಗರ, ಬಾಸ ಭಾರತ, ಸುಳಿಯಲ್ಲಿ ಸಿಕ್ಕವರು, ಮಹಾಕಾಲ, ಚಮ್ಮಾರನ ಚಾಲಾಕಿ ಹೆಂಡತಿ, ಹೇಮಂತ, ಸಾಂಬಶಿವ ಪ್ರಹಸನ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಿದ್ರಾನಗರಿ, ಮಾರಿಕಳೆ, ಶಾರದ, ನಾಗಮಂಡಲ, ಚೋರ ಚರಣದಾಸ, ಐಸಿಯು, ನನ್ನೊಳಗಿನ ಅವಳು, ಅಹಲ್ಯ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. 20ಕ್ಕೂ ಅಧಿಕ ನಾಟಕಗಳಿಗೆ ಬೆಳಕಿನ ವಿನ್ಯಾಸವನ್ನೂ ಮಾಡಿದ್ದಾರೆ.
ಪ್ರತಿಷ್ಠಿತ ರಂಗಭೂಮಿ (ರಿ.) ಉಡುಪಿಯೊಂದಿಗೆ 25 ವರ್ಷಗಳ ಕಾಲ ಸದಸ್ಯ, ಕೋಶಾಧಿಕಾರಿ, ಕಾರ್ಯದರ್ಶಿ, ಶಿಬಿರ ಸಂಚಾಲಕ ಹಾಗೂ ನಾಟಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ‘ಹೀಗೊಂದು ರಂಗ ಕಲಿಕೆ’ ಎಂಬ ಪರಿಕಲ್ಪನೆಯಡಿ ನವರಸಗಳ ರಂಗ ಕಲಿಕೆಯನ್ನು ರಾಜ್ಯದ ಹಿರಿಯ ರಂಗ ನಿರ್ದೇಶಕರ ಮೂಲಕ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದರು.
ಜಿಲ್ಲಾಡಳಿತದ ಸಹಯೋಗದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ಹತ್ತು ವರ್ಷಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ 250ಕ್ಕೂ ಅಧಿಕ ಬೀದಿ ನಾಟಕಗಳ ಆಯೋಜನೆ ಹಾಗೂ ಸಂಚಾಲನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿರುವ ಅವರು ಗುರ್ಬಿ ಕಲಾತ್ಮಕ ಚಲನಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಹಲವು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪರಿಸರವಾದಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ಕುರಿತ 25 ನಿಮಿಷಗಳ ಸಾಕ್ಷ್ಯಚಿತ್ರವನ್ನೂ ರಚಿಸಿದ್ದಾರೆ.
ಪರಿಸರ ಸಂರಕ್ಷಣೆಯ ‘ನಮ್ಮ ಮನೆ ನಮ್ಮ ಮರ’ ಅಭಿಯಾನದ ಮೂಲಕ ಗುರುರಾಜ್ ಸನಿಲ್ ಹಾಗೂ ಅವಿನಾಶ್ ಕಾಮತ್ ಅವರೊಂದಿಗೆ ಸೇರಿ ಉಡುಪಿ ಜಿಲ್ಲೆಯಲ್ಲಿ ಮನೆಗಳು, ದೇವಸ್ಥಾನ, ಮಸೀದಿ, ಚರ್ಚ್, ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಹಾಗೂ ಅಂಗಡಿ ಮುಂಗಟ್ಟುಗಳ ಆವರಣದಲ್ಲಿ 16 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದ್ದಾರೆ.
ಕಳೆದ 27 ವರ್ಷಗಳಲ್ಲಿ 500ಕ್ಕೂ ಅಧಿಕ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಬಡ ರೋಗಿಗಳಿಗೆ ಉಚಿತ ಔಷಧಿ ಹಾಗೂ ಅಗತ್ಯ ವೈದ್ಯಕೀಯ ಕಿಟ್‌ಗಳನ್ನು ಒದಗಿಸುವ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರವಿರಾಜ್ ಎಚ್.ಪಿ., ಕಳೆದ ಆರು ವರ್ಷಗಳಿಂದ ಸಂಸ್ಥೆಯ ಸಂಚಾಲಕರಾಗಿ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ವಿಶ್ವಪ್ರಭಾ ಪುರಸ್ಕಾರ, ಪಂಚಮಿ ಪುರಸ್ಕಾರ, ಶಾರದಾ ಕೃಷ್ಣ ಪುರಸ್ಕಾರ, ಮಲಬಾರ್ ವಿಶ್ವ ರಂಗ ಪುರಸ್ಕಾರ, ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ, ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಯೋಜನೆಗಳ ಮೂಲಕ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ 450ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ‘ಕಥೆ ಕೇಳೋಣ’ ಸರಣಿ ಮೂಲಕ ಮಣಿಪಾಲ ರೇಡಿಯೋದಲ್ಲಿ 220ಕ್ಕೂ ಅಧಿಕ ಸಾಹಿತರ ಸ್ವರಚಿತ ಕಥೆಗಳನ್ನು ಪ್ರಸಾರ ಮಾಡಿಸಿದ್ದು, ‘ಮನೆಯೇ ಗ್ರಂಥಾಲಯ’ ಅಭಿಯಾನದಡಿ 210ಕ್ಕೂ ಅಧಿಕ ಮನೆಗಳು, ಶಾಲೆಗಳು, ಅಂಗಡಿ ಮುಂಗಟ್ಟುಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಪ್ರೋತ್ಸಾಹ ನೀಡಿದ್ದಾರೆ.
‘ಕನ್ನಡ ಮಾತನಾಡು’ ಕಾರ್ಯಕ್ರಮದ ಮೂಲಕ ಕನ್ನಡ ಮಾತನಾಡಲು ಹಾಗೂ ಬರೆಯಲು ಆಸಕ್ತಿ ಹೊಂದಿದವರಿಗೆ ಶಿಬಿರಗಳನ್ನು ಆಯೋಜಿಸಿದ್ದಾರೆ. ‘ಉಡುಪಿ ಚಾವಡಿ’ ಮೂಲಕ ಹಿರಿಯ ಸಾಹಿತಿಗಳು ಹಾಗೂ ಕಲಾವಿದರೊಂದಿಗೆ ಸಂವಾದ ನಡೆಸಿ ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ತಾಲೂಕು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದು, ಶಾಲಾ-ಕಾಲೇಜುಗಳಲ್ಲಿ ಕವಿ ಗೋಷ್ಠಿಗಳನ್ನೂ ಆಯೋಜಿಸಿದ್ದಾರೆ.
ರಂಗಭೂಮಿ ಕ್ಷೇತ್ರದ ಉತ್ತಮ ನಟನೆಗಾಗಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು, ನಾಗಮಂಡಲ ನಾಟಕ ನಿರ್ದೇಶನಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿ, ತುಳುಕೂಟ ಉಡುಪಿ ವತಿಯಿಂದ ರಂಗಭೂಮಿ ಸಾಧನೆಗಾಗಿ ಸಿಜಿಕೆ ರಂಗ ಪ್ರಶಸ್ತಿ, ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಸಾಧನಾಶ್ರೀ ಪ್ರಶಸ್ತಿ, ಪರಿಸರ ಸೇವೆಗಾಗಿ ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಗ್ರೀನರಿ ಅವಾರ್ಡ್, ಭಾವನಾ ಫೌಂಡೇಶನ್‌ನ ‘ಕಲಾ ಸಿಂಧು’ ಪ್ರಶಸ್ತಿ ಹಾಗೂ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ‘ಕಮಲ ಪತ್ರ’ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ–ಗೌರವಗಳಿಗೆ ಭಾಜನರಾಗಿದ್ದಾರೆ.
ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೈಂಟ್ಸ್ ಇಂಟರ್‌ನ್ಯಾಷನಲ್, ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳಿಂದಲೂ ಅವರು ಗೌರವಿಸಲ್ಪಟ್ಟಿದ್ದಾರೆ.
ರಂಗಭೂಮಿ, ಸಾಹಿತ್ಯ, ಪರಿಸರ, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ–ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸಲ್ಲಿಸಿರುವ ಬಹುಮುಖ ಸೇವೆಯನ್ನು ಪರಿಗಣಿಸಿ ರವಿರಾಜ್ ಎಚ್.ಪಿ. ಅವರನ್ನು ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ತಿಳಿಸಿದ್ದಾರೆ.