-->
 ಹೈರಾಕ್ಸ್ ಫಿಟ್ನೆಸ್ ಸ್ಪರ್ಧೆ ಪೂರ್ಣಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ.

ಹೈರಾಕ್ಸ್ ಫಿಟ್ನೆಸ್ ಸ್ಪರ್ಧೆ ಪೂರ್ಣಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ.


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ಹಾಗೂ ಮಂಗಳೂರಿನ ಫಿಟ್ನೆಸ್ ತರಬೇತುದಾರ, ಅಂತರರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ಮುಂಬೈನಲ್ಲಿ ನಡೆದ ಜಾಗತಿಕ ಮಟ್ಟದ ‘ಹೈರಾಕ್ಸ್’ (HYROX) ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಮುಂಬೈನ ಗೋರೆಗಾಂವ್‌ನ ನೆಸ್ಕೋ ಕೇಂದ್ರದ ಹಾಲ್ 6ರಲ್ಲಿ ಸೆಪ್ಟೆಂಬರ್ 17ರಿಂದ 20ರವರೆಗೆ ನಡೆದ ಸ್ಪರ್ಧೆಯಲ್ಲಿ ದರ್ಶನ್ ಎಚ್‌.ವಿ. ಹಾಗೂ ‘ಕಾಷಾರ್ಪ್ ಫಿಟ್ನೆಸ್’ ಸಂಸ್ಥೆಯ ಪ್ರದೀಪ್ ಕುಮಾರ್ ಆಚಾರ್ಯ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಜೋಡಿಯಾಗಿ ಸ್ಪರ್ಧಿಸಿದರು. ಮಾಸ್ಟರ್ಸ್ ಯೂನಿಯನ್ ವಿಶ್ವವಿದ್ಯಾಲಯವು ಕ್ರೀಡಾಕೂಟದ ಅಧಿಕೃತ ಪಾಲುದಾರನಾಗಿ ಸಹಕರಿಸಿತು.

ಸ್ಪರ್ಧೆಯಲ್ಲಿ 8 ಕಿಲೋಮೀಟರ್ ಓಟದೊಂದಿಗೆ ಎಂಟು ವಿವಿಧ ಕಠಿಣ ಫಂಕ್ಷನಲ್ ವ್ಯಾಯಾಮಗಳನ್ನು ಪೂರ್ಣಗೊಳಿಸಬೇಕಾಗಿತ್ತು. ದರ್ಶನ್ ಎಚ್‌.ವಿ. ಮತ್ತು ಪ್ರದೀಪ್ ಕುಮಾರ್ ಆಚಾರ್ಯ ಅವರ ಜೋಡಿ ಈ ಸಂಪೂರ್ಣ ರೇಸ್ ಅನ್ನು 1 ಗಂಟೆ 39 ನಿಮಿಷ 9 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಹೈರಾಕ್ಸ್ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಒಳಾಂಗಣ ಫಿಟ್ನೆಸ್ ರೇಸ್ ಆಗಿದ್ದು, 2017ರಲ್ಲಿ ಜರ್ಮನಿಯಲ್ಲಿ ಆರಂಭಗೊಂಡಿದೆ. ವಿಶ್ವದ ಯಾವುದೇ ನಗರದಲ್ಲಿ ಸ್ಪರ್ಧೆ ನಡೆದರೂ ಇದರ ದೂರ, ನಿಯಮಗಳು ಹಾಗೂ ವ್ಯಾಯಾಮಗಳ ಮಾದರಿ ಒಂದೇ ಆಗಿರುವುದು ಇದರ ವಿಶೇಷತೆಯಾಗಿದೆ. ಸ್ಪರ್ಧಿಗಳ ಸಹಿಷ್ಣುತೆ, ದೈಹಿಕ ಸಾಮರ್ಥ್ಯ, ಶಕ್ತಿ, ಸ್ಟ್ಯಾಮಿನಾ ಹಾಗೂ ತಂಡದ ಸಮನ್ವಯವನ್ನು ಈ ಸ್ಪರ್ಧೆ ಪರೀಕ್ಷಿಸುತ್ತದೆ.

ಸ್ಪರ್ಧೆಯ ಮಾದರಿಯಂತೆ ಪ್ರತಿ ಒಂದು ಕಿಲೋಮೀಟರ್ ಓಟದ ಬಳಿಕ ಒಂದೊಂದು ಫಂಕ್ಷನಲ್ ವರ್ಕ್‌ಔಟ್ ಪೂರ್ಣಗೊಳಿಸಬೇಕಾಗುತ್ತದೆ. ಸ್ಕೀಯಿಂಗ್, ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪೀ ಬ್ರಾಡ್ ಜಂಪ್ಸ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲಂಜಸ್ ಹಾಗೂ ವಾಲ್ ಬಾಲ್ಸ್ ಸೇರಿದಂತೆ ಒಟ್ಟು ಎಂಟು ವ್ಯಾಯಾಮಗಳನ್ನು ಸ್ಪರ್ಧಿಗಳು ಪೂರ್ಣಗೊಳಿಸಬೇಕು.

ಡಬಲ್ಸ್ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು 8 ಕಿಲೋಮೀಟರ್ ಓಟವನ್ನು ಒಟ್ಟಾಗಿ ಪೂರ್ಣಗೊಳಿಸಬೇಕು. ಎಂಟು ವರ್ಕ್‌ಔಟ್ ಕೇಂದ್ರಗಳಲ್ಲಿನ ಕೆಲಸ ಹಾಗೂ ನಿಗದಿತ ತೂಕವನ್ನು ಇಬ್ಬರೂ ಪರಸ್ಪರ ಹಂಚಿಕೊಂಡು ನಿರ್ವಹಿಸಬಹುದಾಗಿದೆ. ಸ್ಪರ್ಧಿಗಳ ಸಮಯವನ್ನು ಟೈಮಿಂಗ್ ಚಿಪ್ ಮೂಲಕ ದಾಖಲಿಸಲಾಗಿದ್ದು, ಪೂರ್ಣಗೊಳಿಸಿದ ಸಮಯವನ್ನು ಜಾಗತಿಕ ಹೈರಾಕ್ಸ್ ಲೀಡರ್‌ಬೋರ್ಡ್‌ನಲ್ಲಿ ದಾಖಲಿಸಲಾಗುತ್ತದೆ.

ಜಾಗತಿಕ ಮಟ್ಟದ ಈ ಫಿಟ್ನೆಸ್ ರೇಸ್‌ನಲ್ಲಿ ಪಾಲ್ಗೊಂಡ ದರ್ಶನ್ ಎಚ್‌.ವಿ. ಹಾಗೂ ಪ್ರದೀಪ್ ಕುಮಾರ್ ಆಚಾರ್ಯ ಅವರ ಸಾಧನೆ ದೈಹಿಕ ಸಾಮರ್ಥ್ಯ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ಗಮನ ಸೆಳೆದಿದೆ.

Ads on article

Advertise in articles 1

advertising articles 2

Advertise under the article