-->
 ‘ಮೈಸಾ’ ಟೀಸರ್ ಔಟ್: ಗೋಂಡ್ ಬುಡಕಟ್ಟು ಮಹಿಳೆಯಾಗಿ ನ್ಯಾಶನಲ್ ಕ್ರಶ್ ರಶ್ಮಿಕಾ

‘ಮೈಸಾ’ ಟೀಸರ್ ಔಟ್: ಗೋಂಡ್ ಬುಡಕಟ್ಟು ಮಹಿಳೆಯಾಗಿ ನ್ಯಾಶನಲ್ ಕ್ರಶ್ ರಶ್ಮಿಕಾ


ನ್ಯಾಷನಲ್ ಕ್ರಶ್ ಎಂದೇ ಜನಪ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಆ್ಯಕ್ಷನ್ ಡ್ರಾಮಾ ‘ಮೈಸಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.


ಚೊಚ್ಚಲ ನಿರ್ದೇಶಕ ರವೀಂದ್ರ ಪುಳ್ಳೆ ನಿರ್ದೇಶನದ ಈ ಚಿತ್ರವನ್ನು Unformula Films ನಿರ್ಮಿಸುತ್ತಿದ್ದು, ಅದ್ಧೂರಿ ಆ್ಯಕ್ಷನ್ ದೃಶ್ಯಗಳು ಹಾಗೂ ಉನ್ನತ ತಾಂತ್ರಿಕ ಗುಣಮಟ್ಟದೊಂದಿಗೆ ಚಿತ್ರವನ್ನು ರೂಪಿಸಲಾಗುತ್ತಿದೆ. ಟೀಸರ್ ಆರಂಭದಲ್ಲೇ ಮೈಸಾ ಪಾತ್ರದ ಧ್ವನಿ ಕೇಳಿಬರುತ್ತಿದ್ದು, “ನಾನು ಸುಸ್ತಾಗಿದ್ದೇನೆ, ನಾನು ನಿಂತುಬಿಟ್ಟಿದ್ದೇನೆ, ನಾನು ಸೋತಿದ್ದೇನೆ” ಎಂಬ ಮಾತುಗಳ ಮೂಲಕ ಆಕೆಯ ಹೋರಾಟದ ಜಗತ್ತಿಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ.


ಚಿತ್ರದಲ್ಲಿ ರಶ್ಮಿಕಾ ಅವರು ಧೈರ್ಯಶಾಲಿ ಹಾಗೂ ಅಂಜದ ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಾಜದ ಅಡೆತಡೆಗಳು ಹಾಗೂ ಎದುರಾಗುವ ಸವಾಲುಗಳಿಗೆ ಹೆದರದೆ ಒಂಟಿಯಾಗಿ ಹೋರಾಡುವ ಮೈಸಾ, ಪ್ರತಿಯೊಂದು ಸವಾಲನ್ನೂ ಎದುರಿಸಲು ಸಜ್ಜಾಗಿರುವ ಪಾತ್ರವಾಗಿ ಚಿತ್ರಿಸಲಾಗಿದೆ. ಕೇವಲ ಯುದ್ಧ ಮಾಡುವವಳಲ್ಲದೆ, ಯುದ್ಧದ ದಿಕ್ಕನ್ನೇ ನಿರ್ಧರಿಸುವ ಶಕ್ತಿಯಾಗಿ ಮೈಸಾಳ ಪಾತ್ರವನ್ನು ಕಟ್ಟಿಕೊಡಲಾಗಿದೆ.

ಪಾತ್ರಕ್ಕಾಗಿ ರಶ್ಮಿಕಾ ಕಠಿಣ ದೈಹಿಕ ತರಬೇತಿ ಪಡೆದಿದ್ದು, ಹಲವು ಸಾಹಸಮಯ ಆ್ಯಕ್ಷನ್ ದೃಶ್ಯಗಳಲ್ಲಿ ಸ್ವತಃ ತೊಡಗಿಸಿಕೊಂಡಿದ್ದಾರೆ. ಬೈಕ್ ರೈಡಿಂಗ್‌ನಿಂದ ಹಿಡಿದು ನೀರಿನೊಳಗಿನ ಸಾಹಸ ದೃಶ್ಯಗಳವರೆಗೆ ಪಾತ್ರಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರ ತೀವ್ರ ಅಭಿನಯ ಟೀಸರ್‌ನಲ್ಲಿ ಗಮನ ಸೆಳೆಯುತ್ತದೆ.

ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್, ರಾಹುಲ್ ರವೀಂದ್ರನ್ ಹಾಗೂ ಸಮುದ್ರಕನಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

ನಿರ್ದೇಶಕ ರವೀಂದ್ರ ಪುಳ್ಳೆ ಅವರ ಕಲ್ಪನೆ ಮತ್ತು ಅದ್ಧೂರಿ ದೃಷ್ಟಿಕೋನ ಟೀಸರ್‌ನಲ್ಲಿ ಸ್ಪಷ್ಟವಾಗಿ ಮೂಡಿಬಂದಿದ್ದು, ವಿಶೇಷವಾಗಿ ನೀರಿನೊಳಗಿನ ದೃಶ್ಯಗಳು ಗಮನ ಸೆಳೆಯುತ್ತವೆ. ಛಾಯಾಗ್ರಾಹಕ ಶ್ರೇಯಾಸ್ ಕೆ. ಕೃಷ್ಣ ಅವರು ಚಿತ್ರದ ದೃಶ್ಯ ವೈಭವವನ್ನು ಕಟ್ಟಿಕೊಟ್ಟಿದ್ದಾರೆ. ಜೇಕ್ಸ್ ಬಿಜಾಯ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಅಂತಾರಾಷ್ಟ್ರೀಯ ಆ್ಯಕ್ಷನ್ ಕೊರಿಯೋಗ್ರಾಫರ್ ಕೆಚಾ ಅವರ ಸಾಹಸ ಸಂಯೋಜನೆ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.

‘ಮೈಸಾ’ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ರಶ್ಮಿಕಾ ಅವರ ವಿಭಿನ್ನ ಹಾಗೂ ಸಾಹಸಮಯ ಪಾತ್ರದ ಕಾರಣದಿಂದ ಚಿತ್ರ ಕುತೂಹಲ ಮೂಡಿಸಿದೆ.

Ads on article

Advertise in articles 1

advertising articles 2

Advertise under the article