ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರಿಂದ ಮಾತೆ ಮೇರಿ ಜನ್ಮದಿನ , ತೆನೆ ಹಬ್ಬ ಆಚರಣೆ
ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಮಾತೆ ಮೇರಿಯ ಜನ್ಮದಿನ ಹಾಗೂ ಮೊಂತಿ (ತೆನೆ) ಹಬ್ಬವನ್ನು ಭಕ್ತಿ, ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ವಿಶೇಷ ಪೂಜೆ, ಪವಿತ್ರ ಬಲಿಪೂಜೆ ಹಾಗೂ ಪ್ರಾರ್ಥನೆಗಳು ನಡೆದವು. ಮಾತೆ ಮೇರಿಯ ಬಾಲ ರೂಪದ ಪ್ರತಿಮೆಗೆ ಮಕ್ಕಳು ಪುಷ್ಪಾರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಮನೆ ಮನೆಗಳಲ್ಲಿ ಸಂಪೂರ್ಣ ಸಸ್ಯಾಹಾರಿ ಊಟ ಹಾಗೂ ಹೊಸ ಅಕ್ಕಿಯ ಹಾಲು ಪಾಯಸದೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲ ರೂಪದ ಪ್ರತಿಮೆಗೆ ಮಕ್ಕಳು ಸಲ್ಲಿಸುತ್ತಿದ್ದ ಪುಷ್ಪಾರ್ಚನೆಯ ವೈಭವ ಮಂಗಳವಾರ ಉತ್ತುಂಗಕ್ಕೇರಿತು. ಚರ್ಚ್‌ಗಳ ಗ್ರೊಟ್ಟೊಗಳ ಮುಂಭಾಗದಲ್ಲಿ ಇರಿಸಲಾಗಿದ್ದ ಮಾತೆ ಮೇರಿಯ ಪ್ರತಿಮೆಗೆ ನೂರಾರು ಮಕ್ಕಳು, ಹಿರಿಯರು ಬಣ್ಣ ಬಣ್ಣದ ಹೂವು ಹಾಗೂ ಹೂವಿನ ಎಸಳುಗಳನ್ನು ಅರ್ಪಿಸಿ ಭಕ್ತಿ ಮತ್ತು ಸಂಭ್ರಮ ಮೆರೆದರು. ಮಾತೆಯ ಮೇಲಿನ ಗೌರವ, ಭಕ್ತಿ ಹಾಗೂ ಹೆಣ್ಮಕ್ಕಳ ರಕ್ಷಣೆಯ ಕಾಳಜಿ ಈ ಆಚರಣೆಯ ಮೂಲಕ ಅನಾವರಣಗೊಂಡಿತು.
ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಧರ್ಮಗುರುಗಳು ಹೊಸ ತೆನೆಗಳಿಗೆ ಆಶೀರ್ವಚನ ನೀಡಿ, ತೆನೆ ಪೂಜೆ ಹಾಗೂ ಪವಿತ್ರ ಬಲಿಪೂಜೆ ನೆರವೇರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅನುಪಸ್ಥಿತಿಯಲ್ಲಿ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಹೊಸ ತೆನೆಯನ್ನು ಆಶೀರ್ವದಿಸಿ ಹಬ್ಬದ ಪವಿತ್ರ ಬಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಹಬ್ಬದ ಸಂದೇಶ ನೀಡಿದ ಅವರು, ಮೊಂತಿ ಹಬ್ಬವು ಧಾರ್ಮಿಕ ಮಹತ್ವವನ್ನು ಹೊಂದಿರುವುದರ ಜತೆಗೆ ಕೃತಜ್ಞತೆ, ಕುಟುಂಬ, ಹಂಚಿಕೆ ಮತ್ತು ಪರಸ್ಪರ ಕಾಳಜಿಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಹೇಳಿದರು.
ಪರಸ್ಪರ ಕಾಳಜಿ, ಕಳಕಳಿ ಹಾಗೂ ಕ್ಷಮೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಸಂದರ್ಭವೂ ಇದಾಗಿದೆ. ಕುಟುಂಬದ ಸದಸ್ಯರು ಪರಿಪೂರ್ಣರಾಗಿರುವುದರಿಂದ ಕುಟುಂಬ ಬಲಿಷ್ಠವಾಗುವುದಿಲ್ಲ. ಬದಲಾಗಿ, ಪರಸ್ಪರ ಅರ್ಥಮಾಡಿಕೊಳ್ಳುವುದು, ತಪ್ಪುಗಳನ್ನು ಕ್ಷಮಿಸುವುದು, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಹಾಗೂ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವುದರಿಂದ ಕುಟುಂಬ ಬಲಿಷ್ಠವಾಗುತ್ತದೆ. ಕ್ಷಮೆ ಸಂಬಂಧಗಳನ್ನು ಗುಣಪಡಿಸಿದರೆ, ಮೆಚ್ಚುಗೆ ಮತ್ತು ಪ್ರೋತ್ಸಾಹ ಅವುಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ತಿಳಿಸಿದರು.
ಮೊಂತಿ ಹಬ್ಬದ ಆಚರಣೆಯು ಭೂಮಿಯೊಂದಿಗಿನ ನಮ್ಮ ಸಂಬಂಧವನ್ನೂ ನೆನಪಿಸುತ್ತದೆ. ಹೊಸ ಬೆಳೆ, ಫಲ-ಪುಷ್ಪಗಳು ಪ್ರಕೃತಿಯ ಔದಾರ್ಯ ಹಾಗೂ ಭೂಮಿಯನ್ನು ದುಡಿದು ಬೆಳೆಸುವ ರೈತರ ಪರಿಶ್ರಮದ ಸಂಕೇತವಾಗಿದೆ. ನಾವು ಪಡೆಯುವ ಆಹಾರಕ್ಕಾಗಿ ಕೃತಜ್ಞರಾಗಿರಬೇಕು, ರೈತರ ಪರಿಶ್ರಮವನ್ನು ಗೌರವಿಸಬೇಕು ಹಾಗೂ ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಬೇಕು ಎಂದು ಕರೆ ನೀಡಿದರು.
ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನವು ಈ ಹಬ್ಬಕ್ಕೆ ಧಾರ್ಮಿಕ ಅರ್ಥವನ್ನು ನೀಡುತ್ತದೆ. ಮೊಂತಿ ಹಬ್ಬ ಸಾರುವ ಕೃತಜ್ಞತೆ, ಹಂಚಿಕೆ, ಹಿರಿಯರಿಗೆ ಗೌರವ, ಕುಟುಂಬ ಪ್ರೀತಿ, ಕ್ಷಮೆ, ಪರಸ್ಪರ ಕಾಳಜಿ ಹಾಗೂ ಪ್ರಕೃತಿಯ ಬಗ್ಗೆ ಗೌರವದಂತಹ ಮೌಲ್ಯಗಳು ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಸ್ಪರ್ಶಿಸುತ್ತವೆ. ಇವು ಯಾವುದೇ ಸಮಾಜವನ್ನು ಶ್ರೀಮಂತಗೊಳಿಸುವ ಸಾರ್ವತ್ರಿಕ ಮೌಲ್ಯಗಳಾಗಿವೆ ಎಂದು ಹೇಳಿದರು.
ಉಡುಪಿ ಶೋಕಮಾತಾ ದೇವಾಲಯದಲ್ಲಿ ಚರ್ಚ್‌ನ ಧರ್ಮಗುರು ವಂ. ಡೆನಿಸ್ ಡೆಸಾ ನೇತೃತ್ವದಲ್ಲಿ ಹಬ್ಬದ ವಿಶೇಷ ಪವಿತ್ರ ಬಲಿಪೂಜೆ ನೆರವೇರಿತು. ವಂ. ಪ್ರವೀಣ್ ಲಿಯೋ ಹಾಗೂ ವಂ. ವಿಜಯ್ ಡಿಸೋಜಾ ಉಪಸ್ಥಿತರಿದ್ದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಚರ್ಚ್‌ನ ರೆಕ್ಟರ್ ಮೊನ್ಸಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಅವರು ಹೊಸ ತೆನೆಯನ್ನು ಆಶೀರ್ವದಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು.
ಮಾತೆ ಮೇರಿಯ ಜನ್ಮದಿನದಂದೇ ಕರಾವಳಿಯಲ್ಲಿ ವಿಶೇಷವಾಗಿ ಆಚರಿಸುವ ತೆನೆ ಹಬ್ಬ ಮನೆ ಮನೆಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಮುಂಜಾನೆಯೇ ಭತ್ತದ ತೆನೆ ಹಾಗೂ ಕಬ್ಬನ್ನು ಗುರಿಕಾರರು ಮೆರವಣಿಗೆಯ ಮೂಲಕ ಚರ್ಚ್‌ಗೆ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನೆರವೇರಿಸಿ ಭಕ್ತರಿಗೆ ಹಂಚಿದರು.
ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಭಕ್ತರು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು. ಹೊಸ ಭತ್ತದ ಕಾಳನ್ನು ಕುಟ್ಟಿ ತಯಾರಿಸಿದ ಅಕ್ಕಿಯಿಂದ ಹಾಲು, ತೆಂಗಿನ ಹಾಲು ಹಾಗೂ ಪಾಯಸ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ತಯಾರಿಸಲಾಯಿತು. ಸಂಪೂರ್ಣ ಸಸ್ಯಾಹಾರಿ ಊಟ ಹಬ್ಬದ ವಿಶೇಷ ಆಕರ್ಷಣೆಯಾಗಿತ್ತು.
ಇದಲ್ಲದೆ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚ್‌ನಲ್ಲಿ ವಂ. ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ. ಚಾರ್ಲ್ಸ್ ಮಿನೇಜಸ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ತೆನೆ ಹಬ್ಬ ಹಾಗೂ ಮಾತೆ ಮೇರಿಯ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.



