-->
 ಅ.10: ಮಾಹೆ ಎಂಎಚ್‌ಆರ್‌ಸಿಯಿಂದ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’

ಅ.10: ಮಾಹೆ ಎಂಎಚ್‌ಆರ್‌ಸಿಯಿಂದ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’


ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಾಹೆ ಹಾಗೂ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟಟ್ ಸೆಂಟರ್ (ಎಂಎಚ್‌ಆರ್‌ಸಿ) ವತಿಯಿಂದ ಅ.10ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2026ರ ಘೋಷವಾಕ್ಯ ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬುದಾಗಿದೆ. ರೋಗಿಗಳ ದೈಹಿಕ ನೋವನ್ನು ಕಡಿಮೆ ಮಾಡುವುದರ ಜತೆಗೆ ಅವರ ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಅಗತ್ಯಗಳಿಗೆ ಸ್ಪಂದಿಸುವುದು ಉಪಶಾಮಕ ಆರೈಕೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಅ.10ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಕರ್ನಾಟಕದ ವಿವಿಧ ಕ್ಲಬ್‌ಗಳ ಓಟಗಾರರು ಹಾಗೂ ಸೈಕ್ಲಿಸ್ಟ್‌ಗಳು ಬೆಳಿಗ್ಗೆ 5.15ಕ್ಕೆ ಮಂಗಳೂರಿನ ಲಾಲ್‌ಬಾಗ್‌ನ ಕಾರ್ಪೊರೇಷನ್ ವೃತ್ತದಿಂದ ಹೊರಟು ಸುಮಾರು 68 ಕಿ.ಮೀ. ಕ್ರಮಿಸಿ ಮಣಿಪಾಲದ ಎಂಎಚ್‌ಆರ್‌ಸಿಗೆ ತಲುಪಲಿದ್ದಾರೆ.

2025ರ ಏಪ್ರಿಲ್‌ನಲ್ಲಿ ಆರಂಭಗೊಂಡ ಎಂಎಚ್‌ಆರ್‌ಸಿಯಲ್ಲಿ ಸೆಪ್ಟೆಂಬರ್ 1ರಿಂದ ರೋಗಿಗಳ ದಾಖಲಾತಿ ಪ್ರಾರಂಭವಾಗಿತ್ತು. 10 ಹಾಸಿಗೆಗಳಿಂದ ಆರಂಭವಾದ ಕೇಂದ್ರವು ಇದೀಗ 40 ಹಾಸಿಗೆಗಳಿಗೆ ವಿಸ್ತರಣೆಯಾಗಿದೆ. ಮೊದಲ ವರ್ಷದಲ್ಲಿ 694 ರೋಗಿಗಳಿಗೆ ಉಚಿತ ಆರೈಕೆ ನೀಡಲಾಗಿದ್ದು, 1,300ಕ್ಕೂ ಅಧಿಕ ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಲಾಗಿದೆ. 2026ರಲ್ಲಿ 65 ಹಾಗೂ 2027ರಲ್ಲಿ 100 ಹಾಸಿಗೆಗಳಿಗೆ ಕೇಂದ್ರವನ್ನು ವಿಸ್ತರಿಸುವ ಯೋಜನೆ ಇದೆ ಎಂದು ನಿರ್ದೇಶಕಿ ಡಾ. ಸೀಮಾ ಆರ್. ರಾವ್ ತಿಳಿಸಿದರು.

ಉಪಶಾಮಕ ಆರೈಕೆ ಜೀವನದ ಕೊನೆಯ ದಿನಗಳಿಗೆ ಮಾತ್ರ ಸೀಮಿತವಲ್ಲ. ಗಂಭೀರ ಕಾಯಿಲೆಯ ಆರಂಭಿಕ ಹಂತದಲ್ಲೇ ರೋಗಿಗಳು ಹಾಗೂ ಕುಟುಂಬದವರು ಉಪಶಾಮಕ ಆರೈಕೆಯ ಸೇವೆ ಪಡೆಯುವುದರಿಂದ ನೋವು ಹಾಗೂ ಇತರ ಸಮಸ್ಯೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯ ಎಂದು ಅವರು ಹೇಳಿದರು.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, ಸಹಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಸ್ ಜೇಕಬ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಡಾ. ನವೀನ್ ಸಾಲಿನ್ಸ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article