ಪ್ರಧಾನಿ ಮೋದಿಯವರ ಸೇವಾ ಸಂಕಲ್ಪದಡಿ ಅಸಹಾಯಕರಿಗೆ ಭೋಜನ ವ್ಯವಸ್ಥೆ
ಪ್ರಧಾನಿ ನರೇಂದ್ರ ಮೋದಿಯವರು ಸಾಂವಿಧಾನಿಕ ಹುದ್ದೆಯಲ್ಲಿ ನಿರಂತರ 25 ವರ್ಷಗಳ ಕಾಲ ದೇಶಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಬಿಜೆಪಿ ದೇಶಾದ್ಯಂತ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ವತಿಯಿಂದ ಕೊಳಲಗಿರಿಯ ‘ಸ್ವರ್ಗ ಆಶ್ರಮ’ದ ಅಸಹಾಯಕ ಬಂಧುಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು.
ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಸದಾನಂದ ಪ್ರಭು ಅವರು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಆಶ್ರಮದ ಸಂಚಾಲಕ ಡಾ. ಶಶಿಕಿರಣ್ ಅವರು ಆಶ್ರಮದ ಸ್ಥಾಪನೆಯ ಹಿನ್ನೆಲೆ ಹಾಗೂ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಇಂತಹ ಸೇವಾ ಕಾರ್ಯಗಳಿಗೆ ಸಮಾಜದಿಂದ ಹೆಚ್ಚಿನ ಬೆಂಬಲ ದೊರೆತಾಗ ಆಶ್ರಮದ ಉದ್ದೇಶ ಮತ್ತಷ್ಟು ಪರಿಣಾಮಕಾರಿಯಾಗಿ ಈಡೇರುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಮಾತನಾಡಿ, ಡಾ. ಶಶಿಕಿರಣ್ ಹಾಗೂ ಅವರ ತಂಡದ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಸಮಾಜದ ಕಟ್ಟಕಡೆಯ ಅಸಹಾಯಕರಿಗೂ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಬೇಕು. ಇಂತಹ ಸೇವಾ ಕಾರ್ಯಗಳಿಗೆ ಬಿಜೆಪಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಸಹಾಯಕ ಬಂಧುಗಳಿಗೆ ಸ್ವತಃ ಊಟ ಬಡಿಸಿ, ಅವರೊಂದಿಗೆ ಭೋಜನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ, ಪ್ರಕೋಷ್ಠ ಸಹ ಸಂಚಾಲಕ ರವಿ ಆಚಾರ್ಯ, ಸಂಯೋಜಕರಾದ ಡಿಲ್ಲೇಶ್ ಶೆಟ್ಟಿ, ವಿಜಯ ಕೊಡವೂರು, ಪದಾಧಿಕಾರಿಗಳಾದ ಶಂಕರ್ ಕುಲಾಲ್, ಉಮೇಶ್ ಶೆಟ್ಟಿ, ಪ್ರಸಾದ್ ಮಲ್ಯ, ಸಂದೀಪ್ ನಾಯಕ್, ರಾಮಾನಂದ ನಾಯಕ್, ಸತೀಶ್ ಗೌಡ, ಕೃಷ್ಣಮೂರ್ತಿ, ಸುರೇಶ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.