ಎಸ್‌ಐಆರ್‌ನಲ್ಲಿ ಫಾರಂ-7 ದುರುಪಯೋಗ ತಡೆಯಲು ಮುಸ್ಲಿಮ್ ಒಕ್ಕೂಟ ಆಗ್ರಹ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರಂ-7 ಅರ್ಜಿಗಳ ದುರುಪಯೋಗವಾಗದಂತೆ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗವು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅರ್ಹ ಮತದಾರರ ಹೆಸರನ್ನು ತಪ್ಪು ಮಾಹಿತಿ ಅಥವಾ ಅನ್ಯಾಯದ ಆಧಾರದ ಮೇಲೆ ಪಟ್ಟಿಯಿಂದ ತೆಗೆದುಹಾಕುವುದು ಅವರ ಪ್ರಜಾಪ್ರಭುತ್ವದ ಹಕ್ಕಿನ ಮೇಲೆ ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನಿಷ್ಪಕ್ಷಪಾತತೆ ಹಾಗೂ ನಿಯಮಾನುಸಾರ ಕ್ರಮಗಳನ್ನು ಖಚಿತಪಡಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಸ್ವೀಕರಿಸಿರುವ ಫಾರಂ-7 ಅರ್ಜಿಗಳ ಸಂಖ್ಯೆ, ಅಂಗೀಕರಿಸಿದ ಹಾಗೂ ತಿರಸ್ಕರಿಸಿದ ಅರ್ಜಿಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಮತದಾರರ ಹೆಸರು ತೆಗೆದುಹಾಕುವ ಮೊದಲು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸಲು ಹಾಗೂ ವಿಚಾರಣೆಯಲ್ಲಿ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗಿದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ದುರ್ಬಲ ವರ್ಗಗಳ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ತಪ್ಪಾಗಿ ಪಟ್ಟಿಯಿಂದ ಕೈಬಿಡದಂತೆ ವಿಶೇಷ ಎಚ್ಚರಿಕೆ ವಹಿಸಬೇಕು. ಯಾವುದೇ ಸಮುದಾಯದ ಅರ್ಹ ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರು ನಿಯೋಗಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸಿ, ಈವರೆಗೆ ಯಾರೊಬ್ಬರ ಹೆಸರನ್ನೂ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಯೋಗದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೊಹಮ್ಮದ್ ಮೌಲಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಕಾರ್ಯದರ್ಶಿ ಜಫ್ರುಲ್ಲಾ ತೋನ್ಸೆ, ಜಿಲ್ಲಾ ಸದಸ್ಯರಾದ ಪೀರು ಸಾಹೇಬ್, ಉಡುಪಿ ತಾಲೂಕು ಜತೆ ಕಾರ್ಯದರ್ಶಿ ಫೈಝ್ ಅಹ್ಮದ್ ಆದಿಉಡುಪಿ ಹಾಗೂ ಜಮೀಯ್ಯತುಲ್ ಫಲಾಹ ಉಡುಪಿ ತಾಲೂಕು ಘಟಕದ ಕಾರ್ಯದರ್ಶಿ ಸಮೀರ್ ಉಪಸ್ಥಿತರಿದ್ದರು.