-->
ಅ.11ರಂದು ಉಡುಪಿಯಲ್ಲಿ ನಾಲ್ಕನೇ ವರ್ಷದ ಮಹಿಷ ಮಹೋತ್ಸವ

ಅ.11ರಂದು ಉಡುಪಿಯಲ್ಲಿ ನಾಲ್ಕನೇ ವರ್ಷದ ಮಹಿಷ ಮಹೋತ್ಸವ


ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಹಾಗೂ ವಿವಿಧ ಸಹಭಾಗಿ ಸಂಘಟನೆಗಳ ಸಹಯೋಗದಲ್ಲಿ ನಾಲ್ಕನೇ ವರ್ಷದ ಮಹಿಷ ಮಹೋತ್ಸವ– ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಅ.11ರಂದು ಉಡುಪಿಯಲ್ಲಿ ಆಯೋಜಿಸಲಾಗಿದೆ ಎಂದು ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಿಷ ಮಹೋತ್ಸವ ಯಾವುದೇ ಧರ್ಮ ಅಥವಾ ಸರ್ಕಾರದ ವಿರುದ್ಧ ನಡೆಯುವ ಕಾರ್ಯಕ್ರಮವಲ್ಲ. ಪುರಾಣ, ಮೌಢ್ಯ ಹಾಗೂ ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ ಮೂಲನಿವಾಸಿಗಳು ಆಚರಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ಭಾರತದ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಅ.11ರ ಭಾನುವಾರ ಬೆಳಗ್ಗೆ 10.30ಕ್ಕೆ ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಣೇಶ್ ನೆರ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಮುರೋಳಿ, ಬೆಂಗಳೂರಿನ ರೈತ ಕೂಲಿ ಸಂಗ್ರಾಮ ಸಮಿತಿಯ ರಾಜ್ಯಾಧ್ಯಕ್ಷ ಎಂ. ಶಿವಣ್ಣ ಕಂದೆಗಾಲ ಹಾಗೂ ಬಹುಜನ ಚಿಂತಕ ಉಡುಪಿಯ ನಾರಾಯಣ ಮಣೂರು ಭಾಗವಹಿಸಲಿದ್ದಾರೆ.

ದಸಂಸ ರಾಜ್ಯ ಸಂಚಾಲಕ ಡಾ. ಉದಯಕುಮಾರ್ ತಲ್ಲೂರು, ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ದಸಂಸ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು ಹಾಗೂ ಉಡುಪಿ ಜಿಲ್ಲಾ ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಕುಮಾರ್ ಪರ್ಕಳ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು. ಪರಮೇಶ್ವರ ಹಾಗೂ ಜಿಲ್ಲಾ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಸನ್ಮಾನಿಸಲಾಗುವುದು ಎಂದು ಗಣೇಶ್ ನೆರ್ಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಯು. ಪರಮೇಶ್ವರ, ದಲಿತ ಚಿಂತಕ ಜಯನ್ ಮಲ್ಪೆ, ಬೋವಿ ವಡ್ಡರ್ ಸಂಘದ ಶಿವಕುಮಾರ್ ಪರ್ಕಳ, ಅಂಬೇಡ್ಕರ್ ಯುವಸೇನೆಯ ವಸಂತ ಪಾದೆಬೆಟ್ಟು, ರವಿರಾಜ್ ಲಕ್ಷ್ಮೀನಗರ, ಹರೀಶ್ ಸಾಲ್ಯಾನ್ ಹಾಗೂ ಸತೀಶ್ ಮಂಚಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article