-->
ಅನಾಥರ ಬದುಕಿಗೆ ಅಮ್ಮನಾದ ಪೂರ್ಣಿಮಾ ಶೆಟ್ಟಿ: ನಿರ್ಗತಿಕರಿಗೆ ‘ವಸುದೈವ ಕುಟುಂಬಕಂ’ ಆಸರೆ

ಅನಾಥರ ಬದುಕಿಗೆ ಅಮ್ಮನಾದ ಪೂರ್ಣಿಮಾ ಶೆಟ್ಟಿ: ನಿರ್ಗತಿಕರಿಗೆ ‘ವಸುದೈವ ಕುಟುಂಬಕಂ’ ಆಸರೆ


ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಆಸರೆಯನ್ನು ಬಯಸುತ್ತಾರೆ. ಆಸರೆ ನೀಡಲು ಯಾರೂ ಇಲ್ಲದವರ ಬದುಕಿನಲ್ಲಿ ನೆರವಿನ ಹಸ್ತ ಚಾಚುವುದು ಮಾನವೀಯತೆಯ ನಿಜವಾದ ಅರ್ಥ. ಇಂತಹ ಮಾನವೀಯ ಸೇವೆಯ ಮೂಲಕ ಉಡುಪಿಯ ಅನಾಥರು, ನಿರ್ಗತಿಕರು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಪಾಲಿಗೆ ಪೂರ್ಣಿಮಾ ಶೆಟ್ಟಿ ಆಶಾಕಿರಣವಾಗಿದ್ದಾರೆ.


ಅನಾಥರು, ನಿರ್ಗತಿಕರು, ಅನಾರೋಗ್ಯದಿಂದ ಬಳಲುತ್ತಿರುವವರು, ಆರ್ಥಿಕ ಸಂಕಷ್ಟದಲ್ಲಿರುವ ಒಂಟಿ ಮಹಿಳೆಯರು... ಹೀಗೆ ಬದುಕಿನ ಕಷ್ಟದ ಹಾದಿಯಲ್ಲಿ ಆಸರೆ ಕಳೆದುಕೊಂಡವರ ಪಾಲಿಗೆ ‘ವಸುದೈವ ಕುಟುಂಬಕಂ ಚಾರಿಟೇಬಲ್ ಟ್ರಸ್ಟ್’ ಇಂದು ಭರವಸೆಯ ಮನೆಯಾಗಿದೆ. 2023ರಿಂದ ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೂರ್ಣಿಮಾ ಶೆಟ್ಟಿ, ಸಂಕಷ್ಟದಲ್ಲಿರುವವರ ಮನೆ ಬಾಗಿಲಿಗೆ ತೆರಳಿ ಅವರ ನೋವು-ನಲಿವುಗಳನ್ನು ಆಲಿಸುತ್ತಿದ್ದಾರೆ. 15 ಮಂದಿ ಸದಸ್ಯರಿರುವ ಟ್ರಸ್ಟ್‌ನ ಮೂಲಕ ಬಡವರಿಗೆ ದಿನಸಿ ಸಾಮಗ್ರಿ, ಔಷಧೋಪಚಾರ ಸೇರಿದಂತೆ ಅಗತ್ಯ ನೆರವು ನೀಡಲಾಗುತ್ತಿದೆ.


ಸಹಾಯವೆಂದರೆ ಕೇವಲ ಒಂದೆರಡು ಬಾರಿ ನೀಡುವ ನೆರವಲ್ಲ ಎಂಬುದನ್ನು ಕಾರ್ಯರೂಪದಲ್ಲಿ ತೋರಿಸಿರುವ ಪೂರ್ಣಿಮಾ ಶೆಟ್ಟಿ ಅವರು, ಪ್ರತಿ ವಾರ ಅಗತ್ಯವಿರುವವರ ಮನೆಗಳಿಗೆ ಭೇಟಿ ನೀಡಿ ಅವರ ಕುಶಲೋಪರಿ ವಿಚಾರಿಸುತ್ತಾರೆ. ಅವರ ಅಗತ್ಯಗಳನ್ನು ತಿಳಿದುಕೊಂಡು ಸಾಧ್ಯವಾದಷ್ಟು ನೆರವು ನೀಡುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ನೂರಕ್ಕೂ ಅಧಿಕ ಮನೆಗಳಿಗೆ ಟ್ರಸ್ಟ್‌ನಿಂದ ವಿವಿಧ ರೀತಿಯ ನೆರವು ನೀಡಲಾಗಿದೆ. 

ಪೂರ್ಣಿಮಾ ಶೆಟ್ಟಿ ಅವರ ಜೊತೆಗೆ ರಮೇಶ್ ತಿಂಗಳಾಯ, ದಶರಥ ಸಿಂಗ್, ವತ್ಸಲಾ ಕೋಟ್ಯಾನ್, ಹರೀಶ್ ಅಂಬಲಪಾಡಿ, ಪವಿತ್ರ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ರಾಮಪ್ಪ ಸಾಲ್ಯಾನ್ ಹೀಗೆ ವಸುದೈವ ಕುಟುಂಬಕಂ ತಂಡದ ಸದಸ್ಯರು ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಯಾರಾದರೂ ಸಹಾಯ ಕೇಳುವವರೆಗೆ ಕಾಯದೆ, ಸಹಾಯದ ಅಗತ್ಯವಿರುವವರ ಮನೆ ಬಾಗಿಲಿಗೆ ತೆರಳಿ ಅವರ ಬದುಕಿನ ನೋವನ್ನು ಅರಿತುಕೊಳ್ಳುವುದು ಪೂರ್ಣಿಮ ಶೆಟ್ಟಿ ಅವರ ವಿಶೇಷ ಮಾನವೀಯ ಗುಣ. ಮೂರು ವರ್ಷಗಳಲ್ಲಿ ನೂರಕ್ಕೂ ಅಧಿಕ ಮನೆಗಳ ಬಾಗಿಲು ತಟ್ಟಿರುವ ಈ ಮಾನವೀಯ ಪಯಣ, ಇನ್ನೂ ಮುಂದುವರಿಯುತ್ತಿದೆ.  

ಉಡುಪಿಯ ಚಿತ್ಪಾಡಿ ಬಡಗಬೆಟ್ಟುವಿನ ಸುಂದರ್ ಮತ್ತು ಅವರ ಸಹೋದರಿ ಜಲಜಾ ಅವರ ಬದುಕು ಅನಾರೋಗ್ಯದ ನೆರಳಿನಲ್ಲಿದೆ. ಆರೋಗ್ಯ ಸಮಸ್ಯೆಯಿಂದಾಗಿ ನಿಯಮಿತವಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ. ದುಡಿದು ಬದುಕಬೇಕೆಂಬ ಮನಸ್ಸಿದ್ದರೂ, ದೇಹ ಸಹಕರಿಸದ ಸ್ಥಿತಿ. ಇಂತಹ ಸಂದರ್ಭದಲ್ಲಿ ಹೊಟ್ಟೆ ತುಂಬಿಸುವುದೇ ಸವಾಲಾಗಿದ್ದಾಗ, 2024ರ ಜೂನ್‌ನಿಂದ ‘ವಸುದೈವ ಕುಟುಂಬಕಂ’ ಅವರ ಮನೆಗೆ ಆಹಾರ ಸಾಮಗ್ರಿಗಳನ್ನು ತಲುಪಿಸುತ್ತಿದೆ. ಅವರ ಪಾಲಿಗೆ ಅದು ಕೇವಲ ಅಕ್ಕಿ, ಬೇಳೆ, ದಿನಸಿ ಸಾಮಗ್ರಿಗಳಲ್ಲ. ‘ನಾಳೆ ಏನು ಮಾಡುವುದು?’ ಎಂಬ ಆತಂಕದ ನಡುವೆ ಸಿಗುವ ಒಂದು ನೆಮ್ಮದಿ. ಪ್ರತಿ ತಿಂಗಳು ಸಿಗುವ ದಿನಸಿ ಸಾಮಗ್ರಿಗಳು ಇವರ ಪಾಲಿಗೆ ಕೇವಲ ಆಹಾರವಲ್ಲ; ಮುಂದಿನ ದಿನದ ಬದುಕಿನ ಮೇಲಿನ ಭರವಸೆಯಾಗಿದೆ.

ಉಡುಪಿಯ ಅಂಬಾಗಿಲಿನ ಕಮಲಾ ಅವರ ಬದುಕಿನ ಸಂಕಷ್ಟ ಇನ್ನಷ್ಟು ಕಠಿಣ. ಕಳೆದ ಆರು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಅವರು ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಒಂದೆಡೆ ಅನಾರೋಗ್ಯ, ಮತ್ತೊಂದೆಡೆ ಹೆಚ್ಚುತ್ತಿರುವ ವೈದ್ಯಕೀಯ ಮತ್ತು ಡಯಾಲಿಸಿಸ್ ವೆಚ್ಚ. ಇದರ ನಡುವೆ ಮನೆ ಬಾಡಿಗೆ ಹಾಗೂ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಅವರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ‘ವಸುದೈವ ಕುಟುಂಬಕಂ’ ಸಂಸ್ಥೆ ಕಮಲಾ ಅವರಿಗೆ ಅಕ್ಕಿ ಹಾಗೂ ಅಗತ್ಯ ದಿನಸಿ ಸಾಮಗ್ರಿಗಳನ್ನು ಒದಗಿಸಿದೆ. ಮಾತ್ರವಲ್ಲದೆ, ಅವರ ಔಷಧೋಪಚಾರ, ಡಯಾಲಿಸಿಸ್ ಹಾಗೂ ಜೀವನ ನಿರ್ವಹಣೆಯ ವೆಚ್ಚಗಳಿಗೂ ಸಾಧ್ಯವಾದಷ್ಟು ನೆರವು ನೀಡುತ್ತಿದೆ.

ಹಸಿದ ಹೊಟ್ಟೆಗೆ ಅನ್ನ ನೀಡುವುದು, ಅನಾರೋಗ್ಯದಲ್ಲಿರುವವರಿಗೆ ಔಷಧಿ ಒದಗಿಸುವುದು, ಒಂಟಿಯಾಗಿ ಬದುಕುತ್ತಿರುವವರ ಮನೆ ಬಾಗಿಲಿಗೆ ತೆರಳಿ ‘ಹೇಗಿದ್ದೀರಿ?’ ಎಂದು ವಿಚಾರಿಸುವುದು—ಇವೆಲ್ಲವೂ ಹಣಕ್ಕಿಂತ ಮಿಗಿಲಾದ ಮಾನವೀಯ ಸ್ಪರ್ಶ. ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಹಲವರಿಗೆ ಸರ್ಕಾರದ ಯೋಜನೆಗಳು ಅಥವಾ ನೆರವಿನ ವ್ಯವಸ್ಥೆಗಳು ತಲುಪದ ಸಂದರ್ಭಗಳಲ್ಲೂ, ಅವರ ಅಗತ್ಯವನ್ನು ಗುರುತಿಸಿ ಕೈಹಿಡಿಯುವ ಕೆಲಸವನ್ನು ‘ವಸುದೈವ ಕುಟುಂಬಕಂ’ ಮಾಡುತ್ತಿದೆ. 

ಪೂರ್ಣಿಮಾ ಶೆಟ್ಟಿ ಅವರಿಗೆ ಇದು ಕೇವಲ ಸೇವಾ ಕಾರ್ಯವಲ್ಲ. ‘ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರೂ ನಮ್ಮ ಕುಟುಂಬದವರೇ’ ಎಂಬ ವಸುದೈವ ಕುಟುಂಬಕಂ ಆಶಯವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮಾನವೀಯ ಪಯಣ. ಹಣದ ನೆರವು, ದಿನಸಿ, ಔಷಧಿ ನೀಡುವುದರಾಚೆಗೆ, ‘ನೀವು ಒಂಟಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆಯನ್ನು ನೀಡುತ್ತಿರುವುದೇ ಈ ಸೇವೆಯ ದೊಡ್ಡ ಮೌಲ್ಯ. ಬದುಕಿನ ಕತ್ತಲೆಯಲ್ಲಿ ಸಿಲುಕಿರುವ ಅನೇಕರಿಗೆ ಈ ನೆರವಿನ ಹಸ್ತ ಇಂದು ಹೊಸ ಭರವಸೆಯ ಬೆಳಕಾಗಿದೆ.

Ads on article

Advertise in articles 1

advertising articles 2

Advertise under the article