Mumbai: ಟಿಸಿಎಸ್ ನಿಂದ ಮಾರ್ಚ್ ಒಳಗೆ 12,200 ಉದ್ಯೋಗಿಗಳು ಹೊರಕ್ಕೆ
28/07/2025
ಉದ್ಯೋಗ ಸೃಷ್ಟಿಯಲ್ಲಿ ದೇಶದ ಅತಿದೊಡ್ಡ ಖಾಸಗಿ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್) 2026ರ ಮಾರ್ಚ್ ವೇಳೆಗೆ ತನ್ನ ಸುಮಾರು 12,200 ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡಲು ನಿರ್ಧರಿಸಿದೆ.
ಇದು ಟಿಸಿಎಸ್ ನ 50 ವರ್ಷಗಳ ಇತಿಹಾಸದಲ್ಲಿಯೇ ಅತಿದೊಡ್ಡ ಉದ್ಯೋಗ ಕಡಿತದ ನಿರ್ಧಾರವಾಗಿದೆ. ಇದು ಟಿಸಿಎಸ್ ಒಟ್ಟು ಉದ್ಯೋಗದ ಶೇಖಡಾ 2ರಷ್ಟು ಕಡಿತ ಆಗಿರಲಿದೆ. ಮುಖ್ಯವಾಗಿ ಕಂಪೆನಿಯ ಮಧ್ಯಮ ಹಾಗೂ ಉನ್ನತ ಮಟ್ಟದ ಉದ್ಯೋಗಿಗಳೇ ಈ ಕಡಿತಕ್ಕೆ ಒಳಗಾಗಲಿದ್ದಾರೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಕೃತಕ ಬುದ್ದಿಮತ್ತೆಯ (AI) ಆವಿಷ್ಕಾರದ ಬಳಿಕದ ಒತ್ತಡಗಳು, ಗ್ರಾಹಕರ ಬೇಡಿಕೆಗಳಲ್ಲಿ ಆಗಿರುವ ಬದಲಾವಣೆಗಳು ಹಾಗೂ ಆದಾಯದ ನಿಧಾನಗತಿಯ ಏರಿಕೆ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಆದರೂ, ಎಐ ಬಳಕೆಯ ವಿಷಯಕ್ಕೂ, ಈ ಉದ್ಯೋಗ ಕಡಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಂಪೆನಿಯ ಸಿಇಒ ಕೃತಿವಾಸನ್ ಸ್ಪಷ್ಟಪಡಿಸಿದ್ದು, ಮಧ್ಯಮ ಹಾಗೂ ಉನ್ನತ ವಲಯ ಉದ್ಯೋಗಿಗಳ ಕೌಶಲ್ಯಗಳು ಹಾಗೂ ಆಧುನಿಕ ಗ್ರಾಹಕರ ಬೇಡಿಕೆಗಳು ತಾಳೆಯಾಗದ ಕಾರಣ ಈ ಉದ್ಯೋಗ ಕಡಿತ ಕಾರ್ಯಕ್ರಮ ನಡೆಸಲಾಗಿದೆ ಎಂದಿದ್ದಾರೆ.
ಟಿಸಿಎಸ್ ಉದ್ಯೋಗ ಕಡಿತದ ಘೋಷಣೆ ಹಿನ್ನೆಲೆಯಲ್ಲಿ ಸೋಮವಾರ ಬಾಂಬೆ ಶೇರು ಮಾರುಕಟ್ಟೆಯಲ್ಲಿ ಕಂಪೆನಿಯ ಶೇರು ಮೌಲ್ಯದಲ್ಲಿ ಸಣ್ಣ ಮಟ್ಟಿನ ಕುಸಿತ ಕಂಡು ಬಂದಿದ್ದು, ಅದರ ಪರಿಣಾಮ ಇನ್ಫೋಸಿಸ್, ವಿಪ್ರೋ ಸಹಿತ 27 ಐಟಿ ಕಂಪೆನಿಗಳ ಶೇರು ಬೆಲೆಯೂ ಕುಸಿತ ಕಂಡಿದೆ