Andhra Pradesh: ಆ.15ರಿಂದ ಸ್ತ್ರೀ ಶಕ್ತಿ ಯೋಜನೆ ಜಾರಿ; ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧಾರ

Andhra Pradesh: ಆ.15ರಿಂದ ಸ್ತ್ರೀ ಶಕ್ತಿ ಯೋಜನೆ ಜಾರಿ; ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧಾರ


ಕರ್ನಾಟಕದ ಶಕ್ತಿ ಯೋಜನೆಯಂತೆ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧರಿಸಿದೆ. 


2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು ಸರ್ಕಾರ  ಆ.15ರಿಂದ `ಸ್ತ್ರೀ ಶಕ್ತಿ’ ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ಎಲ್ಲ ಬಾಲಕಿಯರು, ಮಹಿಳೆಯರು, ಮಂಗಳಮುಖಿಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಈ ಕುರಿತು ರಾಜ್ಯ ಸಾರಿಗೆ, ರಸ್ತೆಗಳು ಮತ್ತು ಕಟ್ಟಡಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ ತಿಳಿಸಿದ್ದಾರೆ.


ಈ ಯೋಜನೆ ರಾಜ್ಯಾದ್ಯಂತ ಆ.15ರಂದು ಜಾರಿಯಾಗಲಿದ್ದು, ಎಪಿಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಸೇರಿ ವಿವಿಧ ಐಷಾರಾಮಿ ಬಸ್ಸುಗಳಿಗೆ ಅನ್ವಯ ಆಗುವುದಿಲ್ಲ. ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಜೊತೆಗೆ ಬಸ್ ಸಿಬ್ಬಂದಿಯು ತಮ್ಮ ಬಟ್ಟೆಯ ಮೇಲೆ ಹಾಕಿಕೊಳ್ಳಬಹುದಾದಂತಹ ಕ್ಯಾಮೆರಾವನ್ನು ಅಳವಡಿಸಲು ಯೋಚಿಸಿದೆ. ಅದಲ್ಲದೇ ಬಸ್ ನಿಲ್ದಾಣಗಳಲ್ಲಿ ಫ್ಯಾನ್, ಕುರ್ಚಿ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ದೊರೆಯಲಿದೆ.

ಈ ಯೋಜನೆಗೆ ವಾರ್ಷಿಕವಾಗಿ 1,942 ಕೋಟಿ ರೂ. ಹಾಗೂ ತಿಂಗಳಿಗೆ ಸುಮಾರು 162 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.



Ads on article

Advertise in articles 1

advertising articles 2

Advertise under the article