
Myasore: ದಸರಾ ಜಂಬೂಸವಾರಿಗೆ ಮೊದಲ ಹಂತದ ಆನೆಗಳ ತಾಲೀಮು ಆರಂಭ
12/08/2025
ಮೈಸೂರಿನಲ್ಲಿ ನಾಡಹಬ್ಬ ದಸರಾಕ್ಕೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ದಸರಾದ ಜಂಬೂ ಸವಾರಿ ಮೆರವಣಿಗೆಗೆ ತಾಲೀಮನ್ನು ಆಗಸ್ಟ್ 12ರಿಂದ ಆರಂಭಿಸಲಾಗಿದೆ. ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಮೊದಲ ಹಂತದ ತಾಲೀಮಿನಲ್ಲಿ 9 ಆನೆಗಳು ಭಾಗವಹಿಸಿದ್ದವು.
ಬೆಳಗ್ಗೆ 7.30ಕ್ಕೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಆನೆ ಶಿಬಿರದಿಂದ ಹೊರಟ ಅಭಿಮನ್ಯು, ಧನಂಜಯ, ಭೀಮ, ಏಕಲವ್ಯ, ಮಹೇಂದ್ರ, ಕಂಜನ್, ಪ್ರಶಾಂತ ಹಾಗೂ ಹೆಣ್ಣಾನೆಗಳಾದ ಕಾವೇರಿ ಮತ್ತು ಲಕ್ಷ್ಮೀ ಆನೆಗಳು ಅರಮನೆ ಮುಂಭಾಗದಿಂದ ಹೊರಟು ಬಲರಾಮ ದ್ವಾರದ ಮೂಲಕ ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೇದ ಆಸ್ಪತ್ರೆ ಸರ್ಕಲ್?ನಿಂದ ಆರ್.ಎಂ.ಸಿ ಮಾರುಕಟ್ಟೆವರೆಗೆ ಸಾಗಿದವು.
ಜಂಬೂಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸುವ 14 ಆನೆಗಳಿಗೆ 3 ಹಂತದ ಜಂಬೂಸವಾರಿ ತಾಲೀಮು ನಡೆಸುವುದು ಸಂಪ್ರದಾಯ. ಅದರಂತೆ ಮೊದಲ ಹಂತದ ಗಜಪಡೆಗೆ ಇಂದಿನಿಂದ ಸಾಮಾನ್ಯ ತಾಲೀಮು ಆರಂಭವಾಗಿದೆ. ಇನ್ನು 10-15 ದಿನಗಳಲ್ಲಿ ಆಗಮಿಸುವ ಎರಡನೇ ಹಂತದ 5 ಆನೆಗಳು ಸೇರಿ ಒಟ್ಟು 14 ಆನೆಗಳ ಸಂಪೂರ್ಣ ತಾಲೀಮು ನಡೆಯಲಿವೆ. ಸಾಮಾನ್ಯ ತಾಲೀಮು ನಂತರ ಎರಡನೇ ಹಂತದಲ್ಲಿ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ. ಆ ಬಳಿಕ ಮರದ ಅಂಬಾರಿ ತಾಲೀಮು ನಡೆಸಿ ಬಳಿಕ ಶಬ್ದಕ್ಕೆ ಹೆದರದಂತೆ ಫಿರಂಗಿ ತಾಲೀಮು ನಡೆಸಲಾಗುತ್ತದೆ. ಬಳಿಕ ಅಂತಿಮವಾಗಿ ಅರಮನೆಯ ಮುಂಭಾಗದಲ್ಲಿ ಜಂಬೂ ಸವಾರಿಯ ಪುಷ್ಪಾರ್ಚನೆ ತಾಲೀಮು ಸಹ ನಡೆಸಲಾಗುತ್ತದೆ.