
Bangalore: ರೋಚಕ ಪಂದ್ಯದಲ್ಲಿ ಭಾರತಕ್ಕೆ ಜಯ; ಕ್ರಿಕೆಟ್ ಸರಣಿ ಡ್ರಾನಲ್ಲಿ ಅಂತ್ಯ
04/08/2025
ಇಂಗ್ಲೆಂಡ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಆಂಡರ್ಸನ್ - ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು 6 ರನ್‌ಗಳ ರೋಚಕ ಜಯ ಗಳಿಸಿ ಸರಣಿಯ ಸಮಬಲ ಪ್ರದರ್ಶನ ನೀಡಿದೆ.
ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು ಕೊನೆಯ ದಿನದಲ್ಲಿ 35 ರನ್ ಬೇಕಿದ್ದರೆ, ಇತ್ತ ಟೀಂ ಇಂಡಿಯಾ ಗೆಲ್ಲಲು 4 ವಿಕೆಟ್ಗಳ ಅವಶ್ಯಕತೆ ಇತ್ತು. ಅದರಂತೆ ಐದನೇ ದಿನದಾಟ ಆರಂಭವಾದ ಕೆಲವೇ ಕೆಲವು ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ 6 ರನ್‌ಗಳ ವೀರೋಚಿತ ಗೆಲುವು ಸಾಧಿಸಿತು. ಟೀಂ ಇಂಡಿಯಾದ ಈ ಗೆಲುವಿನ ಶ್ರೇಯ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸಲ್ಲಬೇಕು. ಎರಡನೇ ಇನ್ನಿಂಗ್ಸಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 5 ವಿಕೆಟ್‌ಗಳನ್ನು ಪಡೆದರೆ, ಇತ್ತ ಪ್ರಸಿದ್ಧ್ 4 ವಿಕೆಟ್ ಪಡೆದರು. ಉಳಿದ 1 ವಿಕೆಟ್ ಆಕಾಶ್ ದೀಪ್ ಪಾಲಾಯಿತು.
ಭಾರತ ತಂಡದ ಆಟಗಾರರು ಇಂಗ್ಲೆಂಡ್ ತಂಡವನ್ನು 367 ರನ್‌ಗಳಿಗೆ ಆಲೌಟ್ ಮಾಡಿ ಭಾರತ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಇದರೊಂದಿಗೆ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡಿತು. ಅಲ್ಲದೆ, ಸಿರಾಜ್ ಸರಣಿಯಲ್ಲಿ ಅತಿ ಹೆಚ್ಚು 23 ವಿಕೆಟ್‌ಗಳನ್ನು ಪಡೆದರು.