
Chennai: ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ; ಕವಿ ವೈರಮುತ್ತು ವಿರುದ್ಧ ಬಿಜೆಪಿ ಕಿಡಿ
12/08/2025
ಸೀತೆಯಿಂದ ಬೇರ್ಪಟ್ಟ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ತಮಿಳು ಗೀತ ರಚನೆಕಾರ ಮತ್ತು ಕವಿ ವೈರಮುತ್ತು ಅವರು ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮಾಯಣ ಮಹಾಕಾವ್ಯದ ತಮಿಳು ಆವೃತ್ತಿ ಬರೆದ ಮಧ್ಯಕಾಲೀನ ತಮಿಳು ಕವಿ ಕಂಬಾರ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ವೈರಮುತ್ತು, ಶ್ರೀರಾಮನು ತನ್ನ ಪತ್ನಿ ಸೀತಾದೇವಿಯಿಂದ ಬೇರ್ಪಟ್ಟ ನಂತರ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. "ಸೀತೆಯಿಂದ ಬೇರ್ಪಟ್ಟ ನಂತರ, ತಾನು ಏನು ಮಾಡುತ್ತಿದ್ದೇನೆಂದು ತಿಳಿಯದ ಮಟ್ಟಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಐಪಿಸಿ ಸೆಕ್ಷನ್ 84 ರ ಅಡಿಯಲ್ಲಿ, ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಯು ಮಾಡಿದ ಕೃತ್ಯವು ಅಪರಾಧವಾಗುವುದಿಲ್ಲ" ಎಂದು ವೈರಮುತ್ತು ತಿಳಿಸಿದ್ದಾರೆ. "ರಾಮನನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲಾಗಿದೆ. ಕ್ಷಮಿಸಲಾಗಿದೆ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಜರಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ವೈರಮುತ್ತು ವಿವಾದಿತ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.