Kundapura: ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ "ಅಪ್ಪು" ಕೋಣ ಸಾವು
08/08/2025
ಕಾಂತಾರ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಕಂಬಳ ಕೋಣದಲ್ಲಿ ಒಂದು ಕೋಣ ಮೃತಪಟ್ಟಿದೆ. ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರ ಅಪ್ಪು ಎಂಬ ಕೋಣ ಶುಕ್ರವಾರ ಸಾವನ್ನಪ್ಪಿದೆ.
ಕಾಂತಾರ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಅವರ ಎಂಟ್ರಿ ದೃಶ್ಯದಲ್ಲಿ ಅವರು ಕಂಬಳ ಕೋಣಗಳನ್ನು ಓಡಿಸುವ ದೃಶ್ಯ ಇತ್ತು, ಅದಕ್ಕಾಗಿ ಬೋಳ್ಳಂಬಳ್ಳಿಯ ಅಪ್ಪು ಮತ್ತು ಕಾಲ ಕೋಣಗಳನ್ನು ಬಳಸಿಕೊಳ್ಳಲಾಗಿತ್ತು. ಚಿತ್ರೀಕರಣಕ್ಕೆ ಮೊದಲು ರಿಷಬ್ ಶೆಟ್ಟಿ ಅವರು ಪರಮೇಶ್ವರ ಭಟ್ ಅವರ ಬಳಿ ತರಬೇತಿ ಪಡೆದಿದ್ದರು. ಅಪ್ಪು ಮತ್ತು ಕಾಲ ಕೋಣಗಳನ್ನು ಓಡಿಸಿದ್ದರು. ನೆಲ್ಲಿಕಾರಿನ ಶೇಣಿಕ್ ರಾಜ್ ಜೈನ್ ಅವರ ಬಳಿಯಿದ್ದ ಅಪ್ಪು ಕೋಣವನ್ನು ದಶಕದ ಹಿಂದೆ ಬೋಳದಗುತ್ತು ಸತೀಶ್ ಶೆಟ್ಟಿ ಅವರು ಕರೆತಂದಿದ್ದರು ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿತ್ತು. ಬಳಿಕ ಬೋಳಂಬಳ್ಳಿ ಮನೆಗೆ ಸೇರಿತ್ತು.
ಕುಂದಾಪುರ ಕಡೆಯಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಗಳಲ್ಲಿ ನಿರಂತರ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು. 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು.