
New Delhi: ಮತಗಳ್ಳತನ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಎಐಸಿಸಿ ನಿರ್ಧಾರ
13/08/2025
ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಶಾಮೀಲಾಗಿ ನಡೆಸಿದ ಮತಗಳ್ಳತನ ವಿರುದ್ಧ ದೇಶವ್ಯಾಪಿ ಅಭಿಯಾನ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಹೋರಾಟದ ಮುಂಚೂಣಿಯಲ್ಲಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಭಿನಂದನೆ ಸಲ್ಲಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇಶದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಆ.14ರಂದು ರಾತ್ರಿ 8 ಗಂಟೆಗೆ 'ವೋಟ್ ಚೋರ್, ಗದ್ದೀ ಛೋಡ್' ಎಂಬ ಘೋಷಣೆಯೊಂದಿಗೆ ಮೊಂಬತ್ತಿ ಜಾಥಾ ಹಮ್ಮಿಕೊಳ್ಳಲು ಸಭೆ ನಿರ್ಣಯ ಕೈಗೊಂಡಿದೆ. ಆಗಸ್ಟ್ 22ರಿಂದ ಸೆ. 7ರ ನಡುವೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ ರ್‍ಯಾಲಿಗಳನ್ನು ನಡೆಸಲು, ಆ ವೇಳೆ ಪ್ರದೇಶ ಕಾಂಗ್ರೆಸ್ ಸಮಿತಿಗಳ ಲಕ್ಷಾಂತರ ಜನರು ಸೇರಿ ಸರಕಾರ ಹಾಗೂ ಚುನಾವಣಾ ಆಯೋಗವು ಉತ್ತರ ನೀಡುವಂತೆ ಆಗ್ರಹಿಸಲು ನಿರ್ಣಯಿಸಲಾಗಿದೆ.
ಸೆ. 15ರಿಂದ ಅ. 15ರವರೆಗೆ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡು, ಬಿಜೆಪಿ ವಿರುದ್ಧ 5 ಕೋಟಿ ಸಹಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ.