
New Delhi: ಮಾನಹಾನಿ ಪ್ರಕರಣ; ಮೇಧಾ ಪಾಟ್ಕರ್‌ಗೆ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ
11/08/2025
ದಿಲ್ಲಿಯ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸಕ್ಸೇನಾ ಅವರು 2001ರಲ್ಲಿ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾದ ಶಿಕ್ಷೆ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ 1 ಲಕ್ಷ ರೂಪಾಯಿ ದಂಡವನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಂ.ಎ0. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ವಿಚಾರಣಾ ನ್ಯಾಯಾಲಯ ನೀಡಿದ್ದ ಪ್ರೊಬೇಷನ್ ಆಧಾರಿತ ಶಿಕ್ಷೆಯನ್ನು ಮುಂದುವರೆಸಿದರೂ, ಅದರಲ್ಲಿ ಕೆಲ ತಿದ್ದುಪಡಿ ಮಾಡಿದೆ. ನಿಯಮಿತ ಹಾಜರಾತಿ ನಿಯಮವನ್ನು ಬದಲಿಸಿ, ಬದಲಿಗೆ ಬಾಂಡ್ ಒದಗಿಸುವಂತೆ ಆದೇಶಿಸಿದೆ.
2001ರಲ್ಲಿ, ದಿಲ್ಲಿಯ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸಕ್ಸೇನಾ ಅವರ ವಿರುದ್ಧ ಮಾಡಿದ ಆರೋಪಗಳಿಗೆ, ಸಕ್ಸೇನಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು ಪಾಟ್ಕರ್ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸದೇ, ಪ್ರೊಬೇಷನ್‌ನಡಿ ಬಿಡುಗಡೆ ಮಾಡಿತ್ತು.