.jpeg)
Sigandoor: ಇನ್ನೂ ಮುಂದುವರಿದಿದೆ ಸಿಗಂದೂರು ಕೇಬಲ್ ಸೇತುವೆ ಕಾಮಗಾರಿ (Video)
05/08/2025
ದೇಶದ ಎರಡನೇ ಅತಿ ದೊಡ್ಡ ಕೇಬಲ್ ಸೇತುವೆ ಎಂಬ ಖ್ಯಾತಿ ಪಡೆದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಟ್ಕರಿ ಅವರಿಂದ ಜುಲೈ 14ರಂದು ಉದ್ಘಾಟಸಲ್ಪಟ್ಟ ಸಿಗಂದೂರು ಸೇತುವೆಯ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಲೇ ಇದೆ.
ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಿರ್ಮಾಣ ಕಾರ್ಯ ಪೂರ್ತಿಗೊಳ್ಳುವ ಮೊದಲೇ ಸೇತುವೆಯನ್ನು ಉದ್ಘಾಟಿಸಲಾಗಿತ್ತು. ಇದೀಗ ಬಾಕಿ ಉಳಿದಿರುವ ಸೇತುವೆ ನಿರ್ಮಾಣದ ಕಾಮಗಾರಿಯ ಉದ್ದೇಶಕ್ಕಾಗಿ 2.44 ಕಿ. ಮೀಟರ್ ಉದ್ದ, 16 ಮೀಟರ್ ಅಗಲದ ಸೇತುವೆಯ 2-3 ಭಾಗಗಳಲ್ಲಿ ಸೇತುವೆಯನ್ನು 9 ಮೀಟರಿನಷ್ಟು ಅಗಲಕ್ಕೆ ಫೆನ್ಸಿಂಗ್ ಮಾಡಿ, ಕ್ರೇನ್ ಬಳಸಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರಣಕ್ಕೆ ಧಾರ್ಮಿಕ ಕ್ಷೇತ್ರವಾಗಿರುವ, ಶಿವಮೊಗ್ಗ ಜಿಲ್ಲೆಯ ತುಮರಿ ಗ್ರಾಮ ಹಾಗೂ ಸಾಗರ ಪಟ್ಟಣವನ್ನು ಸಂಪರ್ಕಿಸುವ ಸೇತುವೆಯ ಉದ್ಘಾಟನೆಯ ಸಂದರ್ಭದಲ್ಲಿ ದೀಪಾಲಂಕಾರಗೊಳಿಸಲಾಗಿತ್ತುಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸೇತುವೆಗೆ ಭರ್ಜರಿ ಪ್ರಚಾರ ದೊರೆತು 'ಹೈಪ್' ಸೃಷ್ಟಿಯಾಗಿತ್ತು. ಆದರೆ ಸೇತುವೆ ವೀಕ್ಷಿಸಲು ಬಂದ ಪ್ರವಾಸಿಗರಿಗೆ ಮುಂದುವರಿದ ಕಾಮಗಾರಿಯ ಕಾರಣ ಸೇತುವೆಯ ಸಂಪೂರ್ಣ ಸೌಂದರ್ಯವನ್ನು ಸವಿಯಲು ಸಾಧ್ಯವಾಗುತ್ತಿಲ್ಲ. ಆದರೂ ಸೇತುವೆಯ ಅಲ್ಲಲ್ಲಿ ಪ್ರವಾಸಿಗರು ಕೇಬಲ್ ಸೇತುವೆಯ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ಕುಟುಂಬ ಹಾಗೂ ಮಿತ್ರರೊಂದಿಗೆ ಗ್ರೂಪ್ ಫೊಟೊ ತೆಗೆಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ.