
Suratkal: ಬಂಟರ ಸಂಘದಿಂದ "ಆಟಿದ ಪೊರ್ಲು" ಕಾರ್ಯಕ್ರಮ; ಸಾಧಕರಿಗೆ ಸನ್ಮಾನ
04/08/2025
ಸುರತ್ಕಲ್ ಬಂಟರ ಸಂಘ ಮತ್ತು ಸುರತ್ಕಲ್ ಮಹಿಳಾ ವೇದಿಕೆ ಇದರ ಸಹಯೋಗದಲ್ಲಿ "ಆಟಿದ ಪೊರ್ಲು" ಮತ್ತು ಅಭಿನಂದನಾ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ದನಗಳನ್ನು ಕಟ್ಟುವ ಸಾಂಪ್ರದಾಯಿಕ ಹಟ್ಟಿಯ ಸ್ವರೂಪದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಭತ್ತದ ಪೈರು ಹೊಡೆಯುವ ಪಡಿ ಮಂಚಕ್ಕೆ ಪೊಲಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನಿಟ್ಟೆಗುತ್ತು ರವಿರಾಜ್ ಶೆಟ್ಟಿ ಅವರು, ಬಂಟ ಸಮುದಾಯದ ಯುವಕರು ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಬಂಟರ ಸಂಘ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿಯ ವಿಚಾರ ಎಂದರು.
ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧಕ ಸಂತೋಷ್ ಕುಮಾರ್ ಎಸ್ ಶೆಟ್ಟಿ ಕುತ್ತೆತ್ತೂರು, ಸಹಕಾರ ಕ್ಷೇತ್ರದ ಸಾಧಕ ವಿನಯಕುಮಾರ್ ಸೂರಿಂಜೆ, ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಜ್ಯೋತಿ ಚೇಳಾರ್, ಮಾಧ್ಯಮ ಕ್ಷೇತ್ರದಲ್ಲಿ ಲೋಕೇಶ್ ಸುರತ್ಕಲ್, ದೈವಾರಾಧನೆ ಕ್ಷೇತ್ರದಲ್ಲಿ ಭೋಜ ಪಾತ್ರಿ ಮಧ್ಯ ಅವರನ್ನು ಸನ್ಮಾನಿಸಲಾಯಿತು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಹೆಜಮಾಡಿ ಶಾರದಾ ಡೆವಲಪರ್ಸ್ನ ಮಾಲಕ ಪ್ರೇಮ್‌ನಾಥ್ ಎಂ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆಗುತ್ತು, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಪ್ರವೀಣ್ ಪಿ ಶೆಟ್ಟಿ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ ಸುರತ್ಕಲ್ , ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಂತಿ ಟಿ ರೈ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಗ್ರಾಮವಾರು ಜಾನಪದ ನೃತ್ಯ, ರೂಪಕ ನಡೆಯಿತು. ಪುರುಷರಿಗೆ ತೆಂಗಿನಕಾಯಿ ಕುಟ್ಟುವುದು, ಮುಂಡಾಸು ಕಟ್ಟುವುದು, ಮಹಿಳೆಯರಿಗೆ ಹಿಡಿಸೂಡಿ ತಯಾರಿಸುವುದು, ಮಡಲು ಹೆಣೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗಚಲನ ಕಲಾವಿದರಿಂದ ತುಳುನಾಡಿನ ಸೌಹಾರ್ದ ಪರಂಪರೆನ್ನು ಬಿಂಬಿಸುವ "ಜಾಗ್ ರ್ತೆ“ ತುಳು ಕಿರುನಾಟಕ ಪ್ರದರ್ಶನಗೊಂಡಿತು.