Udupi: ಮಳೆಹಾನಿ: ನಿಗದಿತ ಕಾಲಾವಧಿಯೊಳಗೆ ವರದಿ ನೀಡಿ; ಜಿಲ್ಲಾಧಿಕಾರಿ ಸೂಚನೆ

Udupi: ಮಳೆಹಾನಿ: ನಿಗದಿತ ಕಾಲಾವಧಿಯೊಳಗೆ ವರದಿ ನೀಡಿ; ಜಿಲ್ಲಾಧಿಕಾರಿ ಸೂಚನೆ


ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯ ವಿವರಗಳನ್ನು ನಿಖರವಾಗಿ ನಿಗಧಿತ ಕಾಲಾವಧಿಯ ಒಳಗೆ ಪೂರ್ಣಗೊಳಿಸಿ, ವರದಿ ನೀಡಬೇಕೆಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
 


ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಉಂಟಾಗಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯ ಜಂಟಿ ಸರ್ವೇ ಕಾರ್ಯಗಳನ್ನು ಯಾವುದೇ ರೀತಿಯ ವ್ಯತ್ಯಾಸ ಆಗದಂತೆ ನಿಖರ ಮಾಹಿತಿಯನ್ನು ಸಂಗ್ರಹಿಸಿ, ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದರು. ಹೆಚ್ಚಿನ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗಗಳು ಕಂಡುಬರುತ್ತಿದೆ. ಇವುಗಳ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು, ಸಂಶೋಧಕರು ಒಳಗೊಂಡ ತಂಡವು ರೈತರ ತೋಟಗಳಿಗೆ ಭೇಟಿ ನೀಡಿ, ರೋಗ ನಿಯಂತ್ರಣಕ್ಕೆ ಕಂಡುಕೊಳ್ಳಬಹುದಾದ ಪರಿಹಾರ ಕ್ರಮಗಳ ಮಾಹಿತಿ ನೀಡಬೇಕು. ರೈತರಿಗೆ ಬೋರ್ಡಲಿನ್ ದ್ರಾವಣ, ಕಾಪರ್ ಸಲ್ಪೆಟ್ ಸೇರಿದಂತೆ ಮತ್ತಿತರ ಔಷಧಿಗಳ ಸಿಂಪರಣೆಗೆ ಸಹಾಯಧನ ಒದಗಿಸಬೇಕು ಎಂದರು.


ಮಳೆಯಿ0ದ ಉಂಟಾಗಿರುವ ರಸ್ತೆ ಗುಂಡಿಗಳ ದುರಸ್ಥಿ ಕೈಗೊಳ್ಳಲು ನೀಡಿರುವ ಅಂದಾಜು ಮೊತ್ತದ ಪ್ರಸ್ತಾವನೆಯು ಹೆಚ್ಚು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಂದಾಜು ನಷ್ಟದ ನಿಖರ ಮೌಲ್ಯವನ್ನು ಪರಿಶೀಲಿಸಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.ಎನ್.ಡಿ.ಆರ್.ಎಫ್ ತಂಡಗಳು ಪ್ರಕೃತಿ ವಿಕೋಫ ಸಂದರ್ಭಗಳಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕಾರ್ಯಗಳ ಬಗ್ಗೆ ಸಮುದಾಯ ಅರಿವು ಕಾರ್ಯಕ್ರಮಗಳನ್ನು ಮೀನುಗಾರರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳುವುದರಿಂದರೊ0ದಿಗೆ ಜಾಗೃತಿ ಮೂಡಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಎಎಸ್‌ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ ಎಸ್, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article