ಜ. 10-11: ಅಜ್ಜರಕಾಡು ಪಾರ್ಕ್ ನಲ್ಲಿ ಪವರ್ ಫುಡ್ ಕಾರ್ನಿವಲ್ (Video)
ಮಹಿಳಾ ಉದ್ದಿಮೆದಾರರ ವೇದಿಕೆಯಾಗಿರುವ ಪವರ್ ಸಂಸ್ಥೆ ವತಿಯಿಂದ ಫುಡ್ ಕಾರ್ನಿವಲ್ ಅನ್ನು ಜ. 10 ಮತ್ತು ಜ. 11ರಂದು ಉಡುಪಿಯ ಅಜ್ಜರಕಾಡು ಪಾರ್ಕ್ನಲ್ಲಿ ಆಯೋಜಿಸಲಾಗಿದೆ ಎಂದು ಪವರ್ ಸ್ಥಾಪಕಾಧ್ಯಕ್ಷೆ ರೇಣು ಜಯರಾಂ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ. 10ರಂದು ಬೆಳಗ್ಗೆ 11.30ಕ್ಕೆ ಪ್ರಸಿದ್ಧ ಫುಡ್ ಬ್ಲಾಗರ್‌ಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿವಿಧ ರೀತಿಯ ಖಾದ್ಯಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ನಿರಂತರ ಕರೋಕೆ ಹಾಡು, ಡಾನ್ಸ್, ಮ್ಯಾಜಿಕ್ ಶೋ, ಲೈವ್ ಕ್ಯಾರಿಕೇಚರ್, ಫನ್ ಗೇಮ್ಸ್ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ. 11ರಂದು ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾ ಪಂಚಾಯತ್ ಸಿಓ ಪ್ರತೀಕ್ ಬಾಯಲ್, ಆಭರಣ ಗ್ರೂಪ್‌ನ ಸಂಧ್ಯಾ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹೆಚ್.ಪಿ.ಆರ್ ಗ್ರೂಪ್ ನ ಅಧ್ಯಕ್ಷ ಹರಿಪ್ರಸಾದ್ ರೈ, , ಮಾಜಿ ಶಾಸಕ ರಘುಪತಿ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸ್ಟಾಲ್ ಇನ್ಸ್ ಚಾರ್ಜ್ ಶಾಲಿನಿ ಬಂಗೇರಾ ಮಾತನಾಡಿ, ಈ ಬಾರಿ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಆಹಾರ ಮಳಿಗೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. 60ಕ್ಕೂ ಹೆಚ್ಚು ಮಳಿಗೆಗಳಲ್ಲಿ 100ಕ್ಕೂ ಅಧಿಕ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳನ್ನು ಸವಿಯಬಹುದು. ಧಾರವಾಡ, ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ಪ್ರಸಿದ್ಧ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಬಾರಿ ಸಣ್ಣ ಸಣ್ಣ ವ್ಯಾಪಾರಿಗಳಿಗೂ ಅವಕಾಶವನ್ನು ಕಲ್ಪಿಸಿದ್ದು, ಪಾತ್ರೆಗಳು, ಮಣ್ಣಿನ ಮಡಿಕೆ ಮಳಿಗೆಗಳು, ಬಟ್ಟೆ ಮಳಿಗೆಗಳು ಈ ಬಾರಿಯ ಪವರ್ ಫುಡ್ ಕಾರ್ನಿವಲ್ ನಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಪವರ್ ಪದಾಧಿಕಾರಿಗಳಾದ ಪ್ರಿಯಾ ಕಾಮತ್, ವೀಣಾ, ತೃಪ್ತಿ ನಾಯಕ್ ಮೊದಲಾದವರು ಇದ್ದರು.