ಜ.17: ಕಿನ್ನಿಮುಲ್ಕಿ ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮ, ರಸಮಂಜರಿ (video)
ಪರ್ಯಾಯ ಮಹೋತ್ಸವದ ಪ್ರಯುಕ್ತ ಕಿನ್ನಿಮುಲ್ಕಿ ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ವತಿಯಿಂದ ಜನವರಿ 17 ರಂದು ಶನಿವಾರ ಸಂಜೆ 7 ಗಂಟೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಿನ್ನಿಮುಲ್ಕಿ ಜಂಕ್ಷನ್ ಬಳಿ ಆಯೋಜಿಸಲಾಗಿದೆ ಎಂದು ನಿರ್ದೇಶಕರಾದ ಕೃಷ್ಣಮೂರ್ತಿ ಆಚಾರ್ಯ ಹೇಳಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಪರ್ಯಾಯದ ಸಂದರ್ಭದಲ್ಲಿ ವಿವಿಧ ರೀತಿಯ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ವತಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶಿರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ಶನಿವಾರ ನಡೆಯುವ ಸಭಾ ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಅಂಗನವಾಡಿಗಳಿಗೆ ಕುಕ್ಕರ್ ಗಳ ವಿತರಣೆ, 100 ಶಾಲೆಗಳಿಗೆ ಫ್ಯಾನ್ ಗಳ ವಿತರಣೆ, 100 ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ, ಕುರ್ಚಿಗಳ ವಿತರಣೆ ಸಹಿತ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಂಗನವಾಡಿಗಳಿಗೆ ಕುಕ್ಕರ್ ವಿತರಣೆಯನ್ನು ಮಾಡಲಿದ್ದಾರೆ. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಶಾಲೆಗಳಿಗೆ ಫ್ಯಾನ್ ವಿತರಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಶಾಲೆಗಳಿಗೆ ಸ್ಪೋರ್ಟ್ಸ್ ಕಿಟ್ ವಿತರಿಸಲಿದ್ದು, ಅಂಗನವಾಡಿಗಳಿಗೆ ಕುರ್ಚಿಗಳನ್ನು ಪರಿಷತ್ ಸದಸ್ಯ ಐವನ್ ಡಿಸೋಜಾ ವಿತರಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಬಡಗಬೆಟ್ಟು ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಆಯ್ದ ಫಲಾನುಭವಿಗಳಿಗೆ ಆರೋಗ್ಯ ನಿಧಿಯನ್ನು ವಿತರಿಸಲಿದ್ದಾರೆ. ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆಯವರು ರಿಕ್ಷಾ ಚಾಲಕರಿಗೆ ಉಚಿತ ವಿಮೆಯನ್ನು ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜದ 50ಕ್ಕೂ ಅಧಿಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕನ್ನಡ ಬಿಗ್ ಬಾಸ್ ವಿಜೇತ ನಟ ಶೈನ್ ಶೆಟ್ಟಿ, ಖ್ಯಾತ ರಂಗಭೂಮಿ, ಚಲನಚಿತ್ರ, ಧಾರವಾಹಿ ನಟಿ ಕೃತಿ ಬಿ ಶೆಟ್ಟಿ ಹಾಗೂ ಬಹುಭಾಷ ನಟಿ ಕಾಜಲ್ ಕುಂದರ್ ಕೂಡ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಹ ಧರ್ಮದರ್ಶಿ ಪದ್ಮಶ್ರೀ ಡಾ.ಚಂದ್ರಶೇಖರ ವಿ ಎಸ್, ಸಮಾಜ ಸೇವಕರಾದ ಡಾ.ಜಯಂತ್ ಭಟ್ ಮಣೋಳಿಗುಜ್ಜಿ, ರಕ್ಷಿತ್ (ಮುನ್ನ) ಮಲ್ಪೆ, ಸತೀಶ್ ಸುವರ್ಣ ಪಂದುಬೆಟ್ಟು, ಅಂಗನವಾಡಿ ಸಹಾಯಕಿ ಕಮಲ ಪೂಜಾರ್ತಿ, ಖ್ಯಾತ ಬಹುಭಾಷಾ ಚಲನಚಿತ್ರ ನಟಿ ಕು.ಮೆನ್ಸಿಟಾ ಡಾಯಸ್, ಯೋಗಪಟು ಕು.ಸೋಜಾ ಅಡ್ಕರ್ ಸುಳ್ಯ ಇವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಪ್ರಖ್ಯಾತ ಗಿಟಾರ್ ವಾದಕ ರಾಜ್ ಗೋಪಾಲ್ ನೇತೃತ್ವದಲ್ಲಿ ಅಂತರಾಷ್ಟ್ರೀಯ ಕಲಾವಿದರನ್ನೊಳಗೊಂಡ ಜೀ ಟಿವಿ ಸರಿಗಮಪ ಹಾಗೂ ಕಲರ್ಸ್ ಎದೆತುಂಬಿ ಹಾಡುವೆನು ರಿಯಾಲಿಟಿ ಶೋ ಗಾಯಕರನ್ನೊಳಗೊಂಡ ಹಾಗೂ ಖ್ಯಾತ ಚಲನಚಿತ್ರ ತಾರೆಯರ ಸಮ್ಮಿಲನದೊಂದಿಗೆ ಅದ್ದೂರಿಯ ರಸಮಂಜರಿ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ ಜರುಗಲಿದೆ. ರಸಮಂಜರಿ ಕಾರ್ಯಕ್ರಮದಲ್ಲಿ ಜೀ ಟಿವಿ ಸರಿಗಮಪ ಖ್ಯಾತಿಯ ಜಸ್ಕರಣ್ ಸಿಂಗ್, ಗಾಯಕರಾದ ವರ್ಣ ಚೌಹಾನ್, ಸುಬ್ರತ್ ಸಾಹೂ, ಐಸಾಕ್ ಹಿನ್ನಲೆಗಾಯಕಿ ಅನನ್ಯ ಪ್ರಕಾಶ್, ಪಲ್ಲವಿ ಸಹಿತ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ಸದಸ್ಯ ಪ್ರಶಾಂತ್ ಆಚಾರ್ಯ ಮತ್ತು ಹರೀಶ್ ಉಪಸ್ಥಿತರಿದ್ದರು.