ಮಂಜುನಾಥ ಭಂಡಾರಿ ಗ್ರಾ.ಪಂ. ಭೇಟಿ ಕೇವಲ ಚುನಾವಣಾ ಗಿಮಿಕ್:ದಿನಕರ ಬಾಬು
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿರುವುದು ಕೇವಲ ಚುನಾವಣಾ ಗಿಮಿಕ್ ಅಲ್ಲದೆ ಮತ್ತೇನು ಅಲ್ಲ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬಬೇಕಾದ ಸರಕಾರ ನಿರ್ಲಕ್ಷ್ಯ ವಹಿಸಿದೆ. ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆಗಳ ದುರಸ್ತಿ, ಮರಳು, ಕೆಂಪು ಕಲ್ಲು ಸಮಸ್ಯೆ, ವಸತಿ ಮಂಜೂರಾತಿ, ಪಡಿತರ ಚೀಟಿ, ಆರೋಗ್ಯ ಸೇವೆ ಸೇರಿದಂತೆ ಜನಸಾಮಾನ್ಯರ ಕಷ್ಟಗಳಿಗೆ ಸರಕಾರ ಯಾವುದೇ ಸ್ಪಂದನೆ ಇಲ್ಲ ಎಂದು ಆರೋಪಿಸಿದರು.
ಗ್ರಾಮೀಣ ಭಾಗದಲ್ಲಿ ಏಕ ವಿನ್ಯಾಸ, 9 & 11 ಮಂಜೂರಾತಿಗೆ ಕಠಿಣ ಕಾನೂನು ರಚನೆ, ಮನೆ ನಿರ್ಮಾಣ ಪರವಾನಿಗೆಗೆ ಪರದಾಟ, ಸರಕಾರಿ ಬಸ್ ಗಳಿಗೆ ಬೇಡಿಕೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಕಿವಿಗೊಡದ ಸರಕಾರದ ನಡವಳಿಕೆಯ ಬಗ್ಗೆ ಮಂಜುನಾಥ ಭಂಡಾರಿ ಅವರು ಮಾತನಾಡಲಿ ಎಂದು ಸವಾಲು ಹಾಕಿದರು.
ಉಡುಪಿ ಜಿಲ್ಲೆಗೆ ಅನುದಾನ ಹಾಗೂ ಸೌಕರ್ಯ ನೀಡುವಲ್ಲಿ ಮಲತಾಯಿ ಧೋರಣೆಯೊಂದಿಗೆ ತಾರತಮ್ಯ ಎಸಗುತ್ತಿರುವ ಹಾಗೂ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿರುವ ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ವಿಧಾನ ಪರಿಷತ್ ಸದಸ್ಯರು ಉತ್ತರಿಸಲಿ. ಕಳೆದ ಎರಡೂವರೆ ವರ್ಷಗಳಲ್ಲಿ ಉಡುಪಿ ಜಿಲ್ಲೆಗೆ ನೀಡಿದ ಅನುದಾನಗಳ ಪಟ್ಟಿಯೊಂದಿಗೆ ಭಂಡಾರಿಯವರು ಚರ್ಚಿಸಲಿ. ಪ್ರಸ್ತುತ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿರುವುದು ಮುಂಬರುವ ಚುನಾವಣೆಗಳನ್ನು ಗಮದಲ್ಲಿಟ್ಟುಕೊಂಡು ನಡೆಸುತ್ತಿರುವ ಕಾಟಾಚಾರದ ಸಭೆ ಎಂಬುದು ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಅರಿವಿದೆ. ಇಂತಹ ಸಭೆಗಳಿಂದ ಜನ ಸಾಮಾನ್ಯರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ದಿನಕರ ಬಾಬು ಕಿಡಿ ಕಾರಿದ್ದಾರೆ.