-->
 ಜ. 5- ಜ.11: ಉಡುಪಿ ತುಳುಕೂಟದಿಂದ ತುಳು ನಾಟಕ ಪರ್ಬ

ಜ. 5- ಜ.11: ಉಡುಪಿ ತುಳುಕೂಟದಿಂದ ತುಳು ನಾಟಕ ಪರ್ಬ


ತುಳುಕೂಟ ಉಡುಪಿ ಇದರ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯು ಜನವರಿ 5ರಿಂದ 11 ರ ತನಕ ಉಡುಪಿ ಎಂ.ಜಿ.ಎO.ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ ವಿವಿಧ 7 ಪ್ರಸಿದ್ದ ತಂಡಗಳಿಗೆ ಅವಕಾಶ ನೀಡಲಾಗಿದೆ. ಜನವರಿ 5ರಂದು ಸಂಜೆ 5 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ ವಿ.ಕೆ. ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ  ಕೆ.ಎಂ.ಶೆಟ್ಟಿ  ತುಳು ನಾಟಕ ಪರ್ಬ ಉದ್ಘಾಟಿಸಲಿರುವರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಉಡುಪಿ ಎಂ.ಜಿ.ಎO. ಕಾಲೇಜು ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದರು. 

ಜನವರಿ 5 ರಂದು ಕಲಾಮಂದಿರ ಉಡುಪಿ ಇವರಿಂದ ಪಿಲಿ ನಾಟಕ, ಜನವರಿ.6 ರಂದು ರಂಗ ಮಿಲನ, ಮುಂಬಯಿ ಇವರಿಂದ ನಾಗ ಸಂಪಿಗೆ ನಾಟಕ, ಜನವರಿ 7 ರಂದು ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಡ ಇವರಿಂದ ಕಾಶಿತೀರ್ಥ ನಾಟಕ, ಜನವರಿ 8 ರಂದು ಕರಾವಳಿ ಕಲಾವಿದರು ಮಲ್ಪೆ, ಉಡುಪಿ ಇವರಿಂದ ಮುಗಿಯಂದಿ ಕಥೆ ನಾಟಕ, ಜನವರಿ 9ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಟ ಇವರಿಂದ ನೆಲ ನೀರ್ದ ದುನಿಪು ನಾಟಕ, ಜನವರಿ 10 ರಂದು ಸುಮನಸಾ ಕೊಡವೂರು, ಉಡುಪಿ ಇವರಿಂದ ಯೇಸ ನಾಟಕ, ಜನವರಿ 11ರಂದು ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ಮಾಯೊಕದ ಮಣ್ಣಕರ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ರೂ.20,000, ರೂ 15,000, ರೂ. 10,000 ನಗದು ಬಹುಮಾನ ನೀಡಲಾಗುವುದು. ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ. 1,000 ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ. 5,000 ಹಾಗೂ ಹೊರರಾಜ್ಯದ ತಂಡಗಳಿಗೆ ರೂ. 10,000 ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುತ್ತದೆ. 

ಉಡುಪಿ ತುಳುಕೂಟದ ಪ್ರತಿಷ್ಠಿತ ಹಾಗೂ ಯಶಸ್ವಿ ಕಾರ್ಯಕ್ರಮವಾದ ಕನ್ನೂರು ತುಳು ನಾಟಕ ಪರ್ಬವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಎಂ.ಜಿ.ಎO. ಕಾಲೇಜು ಉಡುಪಿ, ಅಖಿಲ ಭಾರತ ತುಳುಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ,ವಿ.ಕೆ.ಯಾದವ್, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article