ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಮರಕಡಿತ ಹಗರಣ: ಶಾಸಕ ಯಶ್ಪಾಲ್ ಭೇಟಿ
Saturday, January 03, 2026
ಉಡುಪಿಯ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ಅಕ್ರಮ ಮರಕಡಿತ ಹಾಗೂ ಮರ ಸಾಗಾಟ ಹಗರಣಕ್ಕೆ ಸಂಬಂಧಿಸಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಮರ ಸಾಗಾಟಕ್ಕೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿದ್ದರೂ 20 ದಿನಗಳಾದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಭಾಗಿಯಾದ ಹಿರಿಯ ಕ್ಷೇತ್ರ ಅಧೀಕ್ಷಕ ಶಂಕರ್ ವಿರುದ್ಧ ತಕ್ಷಣ ಶಿಸ್ತುಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಅನುಕೂಲಕ್ಕಾಗಿ 400 ಎಕರೆ ಭೂಮಿಯನ್ನು ಮೀಸಲಿಟ್ಟಿದ್ದರೂ, ರೈತರಿಗೆ ಪೂರಕವಾದ ಯಾವುದೇ ಅಭಿವೃದ್ಧಿ ನಡೆದಿಲ್ಲ. ಬದಲಾಗಿ ಕೆಲ ಅಧಿಕಾರಿಗಳು ತಮ್ಮ ಖಾಸಗಿ ಉದ್ದೇಶಗಳಿಗೆ ಇಲ್ಲಿನ ಸ್ವತ್ತುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಒಬ್ಬ ಅಧಿಕಾರಿಯ ಬೇಜಾವಾರಿಯಿಂದ ಕೃಷಿಕರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಶಂಕರ್ ಅವರನ್ನು ಅಮಾನತು ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಶಾಸಕ ಎಚ್ಚರಿಸಿದರು.
ಕೃಷಿ ಸಂಶೋಧನಾ ಕೇಂದ್ರದಲ್ಲಿ ಮರಗಳ ಗೆಲ್ಲು ತೆಗೆಯುವ ನೆಪದಲ್ಲಿ ನೂರಾರು ಮರಗಳನ್ನು ಕಡಿದು ಸಾಗಿಸಲಾಗಿದ್ದು, ಅಧಿಕಾರಿಗಳ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದ್ದಂತೆ ಗುತ್ತಿಗೆದಾರರ ಮೇಲೆ ಆರೋಪ ಹೊರಿಸಲಾಗಿದೆ. ಈ ಪ್ರಕರಣದ ಸಮಗ್ರ ತನಿಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
