-->
 ಬಹುಮುಖ ಪ್ರತಿಭೆ ರಾಕೇಶ್ ಅಡ್ಕ ಅವರಿಗೆ ಕಂಬಳ ಗುತ್ತು ಪ್ರಶಸ್ತಿ

ಬಹುಮುಖ ಪ್ರತಿಭೆ ರಾಕೇಶ್ ಅಡ್ಕ ಅವರಿಗೆ ಕಂಬಳ ಗುತ್ತು ಪ್ರಶಸ್ತಿ


ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆ, ಪ್ರಸಿದ್ದ ಯುವ ವೇಷಧಾರಿ, ಯಕ್ಷಗುರು, ಸಂಘಟಕ , ಪ್ರಯೋಗ ಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಅವರನ್ನು ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  

ಜ. 11ರಂದು ಮಂಗಳೂರಿನ ಕದ್ರಿ ಕಂಬಳಗುತ್ತಿನ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ರಾಕೇಶ್ ಅವರು ಪ್ರಖರ ರಾಷ್ಟ್ರೀಯವಾದಿ ಸಂಘಟಕ, ಶಿಕ್ಷಕ ದಿ. ಜಲಂಧರ ರೈ ಅವರ ಶಿಷ್ಯರಾಗಿ ಹವ್ಯಾಸಿ ವಲಯದಲ್ಲಿ ಸಿದ್ದಿ ಪ್ರಸಿದ್ದಿ ಪಡೆದು ಪುಂಡು, ಸ್ತ್ರೀ, ರಾಜವೇಷ ನಿರ್ವಹಣೆ ಯಲ್ಲಿ  ಅನುಪಮ ಸಾಧನೆ ಮಾಡಿದ್ದಾರೆ. ಕಟೀಲು, ಬಪ್ಪನಾಡು ಮೇಳಗಳಲ್ಲಿ ಮೆರೆದು, ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ಸೇವೆ ಮಾಡುತ್ತಾ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರರಾಗಿ ದುಡಿಯುತ್ತಿದ್ದಾರೆ. ಮೇಳಗಳ ತಿರುಗಾಟದ ಜೊತೆಯಲ್ಲೇ ಮೂರು ಜಿಲ್ಲೆಗಳಲ್ಲಿ 19 ಕೇಂದ್ರ ಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಗುರು ಆಗಿದ್ದಾರೆ.

ಕದ್ರಿ ಕಂಬಳ ಗುತ್ತಿನ ಯಜಮಾನರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣೆ ಯೊಂದಿಗೆ ಪ್ರಶಸ್ತಿ ನೀಡಲಾಗುವುದು.

ಖ್ಯಾತ ವೈದ್ಯ ಡಾ. ಜಯಶಂಕರ ಮಾರ್ಲ ಅವರು ಪ್ರಶಸ್ತಿ ವಿತರಿಸಲಿರುವರು ಎಂದು ಸೇವಾರ್ಥಿ ಉಷಾ ನವನೀತ ಶೆಟ್ಟಿ ತಿಳಿಸಿದ್ದಾರೆ. ಈ ವೇಳೆ ಕದ್ರಿ ಕಂಬಳ ಗದ್ದೆ ಯಲ್ಲಿ ಪಾವಂಜೆ ಮೇಳದ "ಶ್ರೀ ದೇವೀ ಮಹಾತ್ಮೆ " ಯಕ್ಷಗಾನ ಸೇವೆ ಬಯಲಾಟ ಜರಗಲಿದೆ. 




Ads on article

Advertise in articles 1

advertising articles 2

Advertise under the article