ತೋರಿಕೆಯ ಸೌಹಾರ್ದತೆ ಬೇಡ ; ಪರ್ಯಾಯ ಮುಸ್ಲಿಂ ಸೌಹಾರ್ದ ಸಮಿತಿಗೆ ಮುನೀರ್ ಕಾಟಿಪಳ್ಳ ಸಲಹೆ
ಉಡುಪಿ ಶಿರೂರು ಪರ್ಯಾಯಕ್ಕೆ ಹೊರೆ ಕಾಣಿಕೆ ನೀಡಲು ಮುಂದಾದ ಪರ್ಯಾಯ ಮುಸ್ಲಿಂ ಸೌಹಾರ್ದ ಸಮಿತಿಗೆ ಮುನೀರ್ ಕಾಟಿಪಳ್ಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಕೋಲು ಕೊಟ್ಟು ಪೆಟ್ಟು ತಿನ್ನುವುದು" ಎಂಬ ಗಾದೆ ಮಾತು ಬಹುಷ ಇವರಿಂದಾಗಿಯೆ ಹುಟ್ಟಿರಬೇಕು. ಅನುಮಾನಿಸುತ್ತಾರೆ, ಅವಮಾನಿಸುತ್ತಾರೆ ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಹೋಗಿ ಉಗಿಸಿಕೊಳ್ಳುವವರ ಕುರಿತು ಯಾರೂ ಅನುಕಂಪ ತೋರುವುದಿಲ್ಲ ಎಂದಿದ್ದಾರೆ. ಹಿಜಾಬ್ ವಿವಾದ ತೀವ್ರಗೊಂಡು ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರದ ಹಂತಕ್ಕೆ ತಲುಪಿದಾಗ, ಉಡುಪಿಯ ಮುಸ್ಲಿಂ ವರ್ತಕರ ನಿಯೋಗವೊಂದು ಈಗಿನ ಪೇಜಾವರ ಶ್ರೀ ಗಳ ಬಳಿಗೆ ತೆರಳಿತ್ತು. ಸೌಹಾರ್ದಯುತವಾಗಿ ಪರಿಸ್ಥಿತಿ ತಿಳಿಗೊಳಿಸಲು ವಿನಂತಿಸಿತ್ತು. ಶ್ರೀಗಳು ಮುಸ್ಲಿಂ ವರ್ತಕರ ನಿಯೋಗದೊಂದಿಗೆ ಕಟುವಾಗಿ ನಡೆದುಕೊಂಡರು, "ನಿಮ್ಮ ಸಮುದಾಯಕ್ಕೆ ತಿಳಿ ಹೇಳಿ, ಆ ಮೇಲೆ ಬನ್ನಿ" ಎಂದು ವಾಪಾಸು ಕಳಿಸಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಈಗ ಅತ್ಯುತ್ಸಾಹದಿಂದ ಒಂದು "ಸೌಹಾರ್ದ" ಸಮಿತಿ ರಚಿಸಿ ಉಡುಪಿ ಮಠದ ಪರ್ಯಾಯಕ್ಕೆ ಹೊರೆಕಾಣಿಕೆ, ತಂಪು ಪಾನೀಯ ವಿತರಿಸುವುದಾಗಿ ಸ್ವಯಂ ಘೋಷಿಸಿಕೊಂಡು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಅತಿರೇಕದ ಮುಸ್ಲಿಂ ದ್ವೇಷವನ್ನೆ ರಾಜಕೀಯ ಬಂಡವಾಳವಾಗಿಸಿಕೊಂಡಿರುವ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣರ ಕೈಯಲ್ಲಿ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ.
"ನಾವು ಮುಸ್ಲಿಮರ ಹೊರೆಕಾಣಿಕೆಗೆ ಅನುಮತಿ ನೀಡಿಲ್ಲ, ಅನಗತ್ಯ ಗೊಂದಲ ಸೃಷ್ಟಿಸಬೇಡಿ" ಎಂದು ಯಶ್ಪಾಲ್ ಸುವರ್ಣ ನೇರ ಎಚ್ಚರಿಕೆ ನೀಡಿದ್ದಾರೆ. ಉಡುಪಿಯ ಯಾವೊಬ್ಬ ಮಠಾಧೀಶರೂ "ಯಶ್ಪಾಲ್ ರ ನಡವಳಿಕೆ ತಪ್ಪು" ಎಂದು ತೋರಿಕೆಗೂ ಸಹಾನುಭೂತಿ ತೋರಿಸಲಿಲ್ಲ.
ಇದೇನು ಹೊಸತಲ್ಲ, ಈ ಹಿಂದೆ ಮಂಗಳೂರಿನಲ್ಲಿ ಸಂಘ ಪರಿವಾರ ಹಮ್ಮಿಕೊಂಡಿದ್ಧ ಪ್ರವೀಣ್ ತೊಗಾಡಿಯಾರ "ಉರಿ ಭಾಷಣ" ದ ಸಮಾಜೋತ್ಸವದ ಶರಬತ್ತಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ದೊಡ್ಡ ಮಟ್ಟದಲ್ಲಿ ಸಕ್ಕರೆ ಒದಗಿಸಿತ್ತು. ತೊಗಾಡಿಯಾರ ಭಾಷಣದ ಉರಿಯೂ ಕಡಿಮೆಯಾಗಲಿಲ್ಲ, ಸೌಹಾರ್ದತೆಯೂ ಬೆಳೆಯಲಿಲ್ಲ. ಮುಸ್ಲಿಮರು ಅವಮಾನಿತರಾಗುವುದೂ ತಪ್ಪಲಿಲ್ಲ. ನೇತ್ರಾವತಿಯಲ್ಲಿ "ನೆತ್ತರು" ಯಥಾಪ್ರಕಾರ ಹರಿಯಿತು.
ಕೋಮುವಾದವನ್ನು ಎದುರಿಸಬೇಕಿರುವುದು, ಸಂವಿಧಾನದ ಮೂಲಕ, ಜಾತ್ಯಾತೀತ ಶಕ್ತಿಗಳನ್ನು ಬಲಗೊಳಿಸುವ ಮೂಲಕ. ತೋರಿಕೆಯ ಸೌಹಾರ್ದತೆ, ಶರಣಾಗತಿಯ ಮೂಲಕ ಅಲ್ಲ. ಅವಮಾನಿಸುವವರ ಮುಂದೆ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕೆ ಹೊರತು ತಲೆ ತಗ್ಗಿಸಬಾರದು.
ತುಳುನಾಡಿನಲ್ಲಿ ನಿಮ್ಮನ್ನು ಪ್ರೀತಿಸುವವರು, ಆತ್ಮೀಯತೆ ತೋರುವವರು, ಸಹೋದರ ಭಾವ ವ್ಯಕ್ತಪಡಿಸುವವರು ಬೇಕಾದಷ್ಟು ಜನರು ಇದ್ದಾರೆ. ಸೌಹಾರ್ದ ಸಮಿತಿ ನಡೆಯಬೇಕಿರುವುದು ಆ ಕಡೆಗೆ. ಅಲ್ಲಿ ಕೊರಗ ಬಂಧುಗಳು ಧರಣಿ ಕೂತಿದ್ದಾರೆ. ಹೊರೆ ಕಾಣಿಕೆಯನ್ನು ಹಿಡಿದುಕೊಂಡು ಅವರ ಬಳಿ ನಡಿಯಿರಿ. ಪ್ರೀತಿಯಿಂದ ತಬ್ಬಿಕೊಳ್ಳುತ್ತಾರೆ. ದಲಿತ ಬಂಧುಗಳ ಸಮಾವೇಶಗಳು, ಅವರ ದೈವಸ್ಥಾನಗಳ ನೇಮೋತ್ಸವಗಳು ಜರುಗುತ್ತಿವೆ ಹೊರೆಕಾಣಿಕೆಯ ಮೆರವಣಿಗೆ ಅಲ್ಲಿಗೆ ತೆರಳಲಿ, ಒಳಗೆ ಕರೆದು ಎಳೆನೀರು ಕೊಡುತ್ತಾರೆ, ನೀವು ಸಿದ್ದರಿದ್ದರೆ ಊಟಮಾಡಿಸಿ ಕಳುಹಿಸುತ್ತಾರೆ.
ಉಚ್ವಿಲ, ಬಾರ್ಕೂರುಗಳಲ್ಲಿ ಮೊಗವೀರ ಬಂಧುಗಳ ದೇವಸ್ಥಾನದ ಜಾತ್ರೆಗಳಿಗೆ ಬಂದವರಿಗೆ ತಂಪು ಪಾನೀಯ ಹಂಚಿ, ತಂಪಾದ ಪ್ರೀತಿ ತೋರುತ್ತಾರೆ. ಕೋಟಿ ಚೆನ್ನಯರ ಗರಡಿಗಳಲ್ಲಿ ನೇಮ, ಜಾತ್ರೆ ನಡೆಯುತ್ತಿವೆ, ಅಲ್ಲಿ ಸೇರಿದವರಿಗೆ ನೀರು, ಪಾನಕ ಹಂಚಿ ಒಡಹುಟ್ಟಿದ ಸೋದರರ ಪ್ರೀತಿ ತೋರುತ್ತಾರೆ.
ಅದೆಲ್ಲ ಬಿಟ್ಟು, ಉಗಿಯುತ್ತಾರೆ ಎಂದು ತಿಳಿದೂ ಉಗಿಸಿಕೊಳ್ಳಲು ಸಾಲಾಗಿ ನಿಲ್ಲುವುದು ದೈನ್ಯತೆಯನ್ನು, ಗುಲಾಮಗಿರಿಯ ಮನಸ್ಥಿತಿಯನ್ನು ತೋರುತ್ತದೆ. ಇಷ್ಟು ಅವಮಾನಕಾರಿಯಾಗಿ ತಲೆಬಾಗಲು ನೀವುಗಳು ಎಲ್ಲಿಂದಲೋ ಬಂದವರಲ್ಲ. ತುಳುವ ಮಣ್ಣಿನಲ್ಲೆ ಹುಟ್ಟಿ ಬೆಳೆದ ಮಣ್ಣಿನ ಮಕ್ಕಳು. ಸ್ವಾಭಿಮಾನದಿಂದ ನಡೆದುಕೊಳ್ಳಿ ಎಂದು "ಪರ್ಯಾಯ ಮುಸ್ಲಿಂ ಸೌಹಾರ್ದ" ಸಮಿತಿಗೆ ಮುನೀರ್ ಕಾಟಿಪಳ್ಳ ಸಲಹೆ ನೀಡಿದ್ದಾರೆ.