ಮಮತಾ ವಿರುದ್ಧ ಇಡಿಯಿಂದ ಹೈಕೋರ್ಟಿಗೆ ದೂರು
ಪಶ್ಚಿಮ ಬಂಗಾಳ ಚುನಾವಣಾ ಸಲಹಾ ಸಂಸ್ಥೆ ಐಪಿಎಸಿಯ ಮುಖ್ಯಸ್ಥ ಪ್ರತಿಕ್ ಜೈನ್ ಅವರ ಮನೆ ಮತ್ತು ಕಚೇರಿಯಲ್ಲಿ ನಡೆದ ಜಾರಿ ನಿರ್ದೇಶನಾಲಯದ (ED) ದಾಳಿಯ ಸಮಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲ್ಯಾಪ್‌ಟಾಪ್, ಫೋನ್ ಮತ್ತು ಅನೇಕ ದಾಖಲೆಗಳನ್ನು ತೆಗೆದುಕೊಂಡು ಹೊರಬಂದಿದ್ದಾರೆ ಎಂದು ಇಡಿ ಆರೋಪಿಸಿದೆ.
ಈ ವಿಚಾರದಲ್ಲಿ ಪ. ಬಂಗಾಲದ ಹೈಕೋರ್ಟ್‌ಗೆ ಹಾಜರಾದ ಇಡಿ ಇಲಾಖೆ, ಬ್ಯಾನರ್ಜಿ ಅವರು ಮುಖ್ಯಮಂತ್ರಿ ಆಗಿದ್ದರೂ “ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ” ಮತ್ತು “ಕಲ್ಲಿದ್ದಲು ಕಳವು ಹಾಗೂ ಹಣದ ಸ್ವಚ್ಛೀಕರಣದಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುತ್ತಿದ್ದಾರೆ” ಎಂದು ಆರೋಪಿಸಿದೆ. ನ್ಯಾಯಾಲಯ ಈ ವಿಚಾರವನ್ನು ನಾಳೆ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಮಮತಾ ಬ್ಯಾನರ್ಜಿ ಅವರು “ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿಯ ಪಿತೂರಿ” ಎಂದು ಹೇಳಿದ್ದಾರೆ. ಇಡಿ ಈ ಆರೋಪವನ್ನು ತಳ್ಳಿ ಹಾಕಿ, “ಇದು ಸಾಕ್ಷಿಗಳ ಆಧಾರದ ಮೇಲಿನ ತನಿಖೆ ಆಗಿದ್ದು, ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸಿಲ್ಲ” ಎಂದು ಹೇಳಿದೆ.
“ಯಾವುದೇ ಪಕ್ಷದ ಕಚೇರಿಯ ಮೇಲೂ ಶೋಧ ನಡೆಯಲಿಲ್ಲ. ಈ ಶೋಧ ಯಾವುದೇ ಚುನಾವಣೆಗೂ ಸಂಬಂಧಪಟ್ಟಿಲ್ಲ. ಇದು ಆರ್ಥಿಕ ಶುದ್ಧೀಕರಣ ವಿರೋಧ ಕಾನೂನಿನ ಅಡಿಯಲ್ಲಿ ನಡೆಯುವ ನಿಯಮಿತ ಕ್ರಮದ ಭಾಗವಾಗಿದೆ. ಶೋಧ ಕಾರ್ಯಾಚರಣೆ ಕಾನೂನಿನಲ್ಲಿ ನಿಗದಿಪಡಿಸಿದ ಎಲ್ಲಾ ಭದ್ರತಾ ಕ್ರಮಗಳನ್ನು ಪಾಲಿಸಿಕೊಂಡು ನಡೆಸಲಾಗಿದೆ,” ಎಂದು ಇಡಿ ಪ್ರಕಟಣೆಯಲ್ಲಿ ಹೇಳಿದೆ.
“ದಾಳಿಯ ವೇಳೆ ಇಡಿ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಕಳವು ಮಾಡಿದ್ದಾರೆ”, ಎಂದು ಪ್ರತಿಕ್ ಜೈನ್ ಅವರ ಕುಟುಂಬ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದೆ.