ಪರಶುರಾಮ ಥೀಂಪಾರ್ಕ್ ಸ್ವಚ್ಛತೆ, ಸುರಕ್ಷತೆ ನಿರ್ಮಿತಿ ಕೇಂದ್ರದ ಜವಾಬ್ದಾರಿ; ಡಿಸಿ ಸೂಚನೆ
ಬೈಲೂರು ಗ್ರಾಮದ ಯರ್ಲಪಾಡಿಯ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ ಹಾಗೂ ಸುರಕ್ಷತಾ ಕಾರ್ಯವನ್ನು ನಿರ್ವಹಿಸಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ನಿರ್ಮಿತಿ ಕೇಂದ್ರಕ್ಕೆ ಅದೇಶಿಸಿದ್ದಾರೆ.
ಕಾರ್ಕಳ ತಾಲೂಕು ಬೈಲೂರು ಗ್ರಾಮದ ಯರ್ಲಪಾಡಿಯ ಪರಶುರಾಮ ಥೀಮ್ ಪಾರ್ಕ್ ನ ಕಾಮಗಾರಿ ಮುಕ್ತಾಯವಾಗುವವರೆಗೂ ಇದರ ನಿರ್ವಹಣೆಯು ಅನುಷ್ಠಾನ ಸಂಸ್ಥೆಯಾದ ಉಡುಪಿ ನಿರ್ಮಿತಿ ಕೇಂದ್ರ ಸಂಸ್ಥೆಯ ಜವಾಬ್ದಾರಿಯಾಗಿದೆ. ಕಾಮಗಾರಿಯು ಸಂಪೂರ್ಣ ಹಸ್ತಾಂತರವಾಗುವವರೆಗೆ ಥೀಂ ಪಾರ್ಕ್ ಸ್ವಚ್ಛತೆ ಹಾಗೂ ಅಲ್ಲಿರುವ ಬೆಲೆಬಾಳುವ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಸಾಮಾಗ್ರಿಗಳು ಇತ್ಯಾದಿಗಳ ಸುರಕ್ಷತೆ ಸೇರಿದಂತೆ ಪಾರ್ಕ್ ನನಿರ್ವಹಣೆಯನ್ನು ಸರಿಯಾಗಿ ವಹಿಸಿ, ಯಾವುದೇ ಸಮಸ್ಯೆಗಳಿಗೆ ಆಸ್ಪದ ನೀಡದೇ ನಿರ್ವಹಣೆ ಮಾಡಬೇಕು. ಜೊತೆಗೆ ಈ ಕೆಳಕಂಡ ಅಂಶಗಳನ್ನು ಪಾಲಿಸುವಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚಿಸಿರುತ್ತಾರೆ.
ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಸ್ವಚ್ಛತಾ ಕಾರ್ಯ, ಗಿಡಗಂಟಿ ತೆರವು ಹಾಗೂ ಕಸ ವಿಲೇವಾರಿ ಕಾರ್ಯಗಳನ್ನು ಕೂಡಲೇ ಕೈಗೊಳ್ಳಬೇಕು. ಸಿ.ಸಿ. ಕ್ಯಾಮೆರಾ ಅಳವಡಿಕೆ, ಸದ್ರಿ ಸ್ಥಳದಲ್ಲಿ ಭದ್ರತಾ ದೃಷ್ಠಿಯಿಂದ 24*7 ಕಾವಲುಗಾರರನ್ನು ನಿಯೋಜಿಸಲು ಕ್ರಮವಹಿಸಬೇಕು. ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ, ಥೀಮ್ ಪಾರ್ಕ್ಗೆ ಸಾರ್ವಜನಿಕರು ಸೇರಿದಂತೆ ಯಾರೊಬ್ಬರೂ ಪ್ರವೇಶಿಸದಂತೆ ಕ್ರಮವಹಿಸಬೇಕು.
ಥೀಮ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಥೀಮ್ ಪಾರ್ಕ್ ಪ್ರದೇಶಕ್ಕೆ ಯಾರಾದರೂ ಅತಿಕ್ರಮಣ ಪ್ರವೇಶ ಮಾಡಿದರೆ ಅವರ ವಿರುದ್ಧ ಎಫ್.ಐ.ಆರ್ ಅಥವಾ ಬಿ.ಎನ್.ಎಸ್.ಎಸ್ 2023 ಪ್ರಕಾರ ಮೊಕ್ಕದ್ದಮೆ ದಾಖಲಿಸಬೇಕು ಹಾಗೂ ಥೀಮ್ ಪಾರ್ಕ್ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮವಹಿಸಬೇಕು.
ಥೀಂ ಪಾರ್ಕ್ ಸ್ಥಳದಲ್ಲಿರುವ ಅಮೂಲ್ಯ ವಸ್ತುಗಳು, ನಿರ್ಮಾಣ ಸಾಮಾಗ್ರಿಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಥೀಂ ಪಾರ್ಕ್ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಸದ್ರಿ ಥೀಮ್ ಪಾರ್ಕ್ನ ಸಂಪೂರ್ಣ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಮೇಲ್ಕಂಡ ವಿಷಯಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಅನುಪಾಲನ ವರದಿಯನ್ನು ಜನವರಿ 10 ರ ಒಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ನೀಡಬೇಕು ಹಾಗೂ ಪ್ರತಿ ವಾರ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಖುದ್ದಾಗಿ ಸ್ಥಳ ಭೇಟಿ ನೀಡಿ ಸ್ವಚ್ಛತೆಯ ಮೇಲುಸ್ತುವಾರಿ ವಹಿಸಿ ಜಿ.ಪಿ.ಎಸ್ ಫೋಟೋದೊಂದಿಗೆ ವರದಿ ನೀಡುವಂತೆ ಸೂಚಿಸಿ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.