ಆಟೋದಲ್ಲಿ ಮಾದಕ ವಸ್ತು ಮಾರಾಟ; ಆರೋಪಿಯ ಬಂಧನ
Tuesday, January 06, 2026
ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಕರಂಬಳ್ಳಿ ರಾಮಬೆಟ್ಟು ಸಮೀಪ ಬಂಧಿಸಿದ್ದಾರೆ.
ಉಡುಪಿ ದೊಡ್ಡಣಗುಡ್ಡೆ ನಿವಾಸಿ ಅಬ್ದುಲ್ ರೌಫ್(26) ಬಂಧಿತ ಆರೋಪಿ. ಈತನಿಂದ 15,000ರೂ. ಮೌಲ್ಯದ 7.59 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಮತ್ತು ಮಾರಾಟ ಮಾಡಿ ಗಳಿಸಿದ್ದ 3100ರೂ. ನಗದು ಹಾಗೂ ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,23,100ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ಎಸ್ಸೈಗಳಾದ ಭರತೇಶ ಕಂಕಣವಾಡಿ, ಗೋಪಾಲ ಕೃಷ್ಣ ಜೋಗಿ ಹಾಗೂ ಸಿಬ್ಬಂದಿ ಹರೀಶ್ ನಾಯ್ಕ, ಪ್ರಸನ್ನ ಸಿ.ನೇತ್ರಾವತಿ, ಸತೀಶ್ ಪಳ್ಳಿ, ಹೇಮಂತ್ ಕುಮಾರ್, ಸಂತೋಷ್ ರಾತೋಡ್, ಆನಂದ ಪಾಲ್ಗೊಂಡಿದ್ದರು.