-->
 ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ- ಡಿಸಿಎಂ ಡಿಕೆ ಶಿವಕುಮಾರ್

ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ- ಡಿಸಿಎಂ ಡಿಕೆ ಶಿವಕುಮಾರ್


ಕರಾವಳಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಿ, ಹೊಸ ಹಾಗೂ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರನ್ನು ಒಳಗೊಂಡ ಕಾರ್ಯಯೋಜನೆಯನ್ನು ರೂಪಿಸಲು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಮಂಗಳೂರು ಅತ್ತಾವರದ ಖಾಸಗಿ ಹೋಟೆಲಿನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕರಾವಳಿ ಪ್ರದೇಶವೆಂದರೆ ಸೌಂದರ್ಯ, ಜ್ಞಾನ ಮತ್ತು ಸಂಪತ್ತಿನ ನೆಲೆ ಎಂದು ಹೇಳಿದ ಡಿಕೆಶಿ, ಎಷ್ಟೊಂದು ಸಾಮರ್ಥ್ಯ ಇದ್ದರೂ ಕರಾವಳಿ ಪ್ರದೇಶ ಏಕೆ ಹಿಂದುಳಿದಿದೆ ಎಂಬುದು ಅರ್ಥವಾಗುವುದಿಲ್ಲ. ಕೊಡಗು ಸೇರಿ ಸುಮಾರು 300 ಕಿಲೋಮೀಟರ್ ಉದ್ದದ ಕರಾವಳಿ ಇತಿಹಾಸವನ್ನು ನೋಡಿದರೆ, ಇಲ್ಲಿನ ಹಿರಿಯರು ರಾಷ್ಟ್ರಕ್ಕೆ ಬ್ಯಾಂಕಿOಗ್ ವ್ಯವಸ್ಥೆ, ಶಿಸ್ತು ಮತ್ತು ಶಿಕ್ಷಣದ ಪರಂಪರೆಯನ್ನು ನೀಡಿದ್ದಾರೆ. ಇದು ಶಿಕ್ಷಣದ ಹಬ್ ಆಗಿದ್ದು, ವೈದ್ಯಕೀಯ, ಎಂಜಿನಿಯರಿAಗ್ ಮತ್ತು ಪಿಯು ಶಿಕ್ಷಣದ ಮೂಲಕ ಮಾನವ ಸಂಪನ್ಮೂಲವನ್ನು ಸೃಷ್ಟಿಸುತ್ತಿದೆ. ಇಂತಹ ವ್ಯವಸ್ಥೆ ರಾಜ್ಯದ ಬೇರೆ ಯಾವುದೇ ಜಿಲ್ಲೆಗಳಲ್ಲಿ ಕಾಣುವುದಿಲ್ಲ ಎಂದರು.

ಇಲ್ಲಿನ ಜನರು ಉದ್ಯೋಗ ಮತ್ತು ಅವಕಾಶಗಳಿಗಾಗಿ ಹೊರರಾಜ್ಯ ಹಾಗೂ ವಿದೇಶಗಳಿಗೆ ತೆರಳುತ್ತಿರುವುದು ವಿಷಾದಕರ ಎಂದು ಹೇಳಿದ ಅವರು, ನಮ್ಮ ಪ್ರಕೃತಿ, ಕಡಲತೀರಗಳು ಗೋವಾಕ್ಕೆ ಸಮಾನವಾಗಿವೆ. ಆದರೂ ನಾವು ಎಲ್ಲೋ ಎಡವಿದ್ದೇವೆ. ಈ ತಪ್ಪುಗಳನ್ನು ಸರಿಪಡಿಸಿ ಹೂಡಿಕೆದಾರರನ್ನು ಆಕರ್ಷಿಸಲು ಹೊಸ, ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದ್ದು, ಅದರ ಚರ್ಚೆಯನ್ನು ಮಂಗಳೂರಿನಿOದಲೇ ಆರಂಭಿಸಲಾಗುವುದು ಎಂದು ಹೇಳಿದರು.

ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕರ್ನಾಟಕದ ಅಭಿವೃದ್ಧಿಯಲ್ಲಿ ಕರಾವಳಿ ಜಿಲ್ಲೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ ಅವರು, ಕೈಗಾರಿಕೆಗಳಿಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿ ಮೂಲಸೌಕರ್ಯ ಒದಗಿಸುವಂತೆ, ಪ್ರವಾಸೋದ್ಯಮ ಇಲಾಖೆಯೂ ಬೀಚ್ ಮತ್ತು ನದಿ ಪ್ರವಾಸೋದ್ಯಮಕ್ಕಾಗಿ ಭೂಸ್ವಾಧೀನ ಮಾಡಿದರೆ ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ಈ ಬಗ್ಗೆ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಇಲಾಖೆ ಒಟ್ಟಾಗಿ ಸಮಗ್ರ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸುನಿಲ್ ಕುಮಾರ್, ಸಂದರ್ಭೋಚಿತವಾಗಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ ಪ್ರಾಸ್ತಾವಿಕ ಭಾಷಣ ಮಾಡಿ, ಕರಾವಳಿಯ ಮೂರು ಜಿಲ್ಲೆಗಳನ್ನು ಬಹು ಉತ್ಪನ್ನ ಪ್ರವಾಸೋದ್ಯಮ ಗಮ್ಯಸ್ಥಾನಗಳಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಯಶಪಾಲ್ ಸುವರ್ಣ, ಸುರೇಶ್ ಕುಮಾರ್, ಕಿಶೋರ್ ಕುಮಾರ್, ಕಿರಣ್ ಕೊಡ್ಗಿ, ಸತೀಶ್ ಶೈಲ್, ಐವನ್ ಡಿಸೋಜ, ರಾಜೇಗೌಡ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಎಂ.ಎ. ಗಫೂರ್, ಶಾಲೆಟ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಅಕ್ರಮ್ ಪಾಷಾ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





Ads on article

Advertise in articles 1

advertising articles 2

Advertise under the article