ಬಳ್ಳಾರಿ ಗಲಾಟೆ; ಸತೀಶ್ ರೆಡ್ಡಿ ಹಾರಿಸಿರುವ ಗುಂಡು ರಾಜಶೇಖರ್ ಗೆ ತಗಲಿರುವ ಸಾಧ್ಯತೆ- ಸಿಎಂ ಸಿದ್ದರಾಮಯ್ಯ
ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪು ಘರ್ಷಣೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪು ಘರ್ಷಣೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಸಾವು ಸಂಭವಿಸಿರುವ ಪ್ರಕರಣದ ತನಿಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಸತೀಶ್ ರೆಡ್ಡಿಯವರು ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ರಾಜಶೇಖರ ಅವರಿಗೆ ತಗುಲಿರಬಹುದು, ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದರು.
ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಜ್ಯದಲ್ಲಿನ ಬಡವರು, ದಲಿತರು, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ವಿಶೇಷ ಕಾಳಜಿಯಿಂದ ಹಾಗೂ ಹೊಸ ಉತ್ಸಾಹದಿಂದ ಎಲ್ಲರೂ ಕಾರ್ಯ ನಿರ್ವಹಿಸಬೇಕೆಂದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಜಕೀಯ ಸ್ವಾತಂತ್ರ‍್ಯ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ‍್ಯದ ಮೇಲೆ ನಿಂತಿದೆ. ರಾಜಕೀಯ ಸ್ವಾತಂತ್ರ‍್ಯ ಯಶಸ್ವಿಯಾಗಬೇಕಾದರೆ ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ‍್ಯ ಸಿಗಬೇಕಿದೆ. ಇಲ್ಲವಾದಲ್ಲಿ ಅಸಮಾನತೆ ಹೋಗಲು ಸಾಧ್ಯವಿಲ್ಲ, ಅಂತೆಯೇ ಅಸಮಾನತೆ ತೊಲಗದೇ, ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವುವೂ ಅಸಾಧ್ಯ ಎಂದು ಹೇಳಿದ್ದನ್ನು ತಿಳಿಸಿದರು.