-->
 ಯುವತಿಗೆ ವಂಚನೆ ಪ್ರಕರಣ; ಜ.24ರಂದು ಮಗುವಿಗೆ ನಾಮಕರಣ ಮಾಡುವ ಮೂಲಕ ಧರಣಿ

ಯುವತಿಗೆ ವಂಚನೆ ಪ್ರಕರಣ; ಜ.24ರಂದು ಮಗುವಿಗೆ ನಾಮಕರಣ ಮಾಡುವ ಮೂಲಕ ಧರಣಿ


ಪುತ್ತೂರಿನ ಯುವತಿಗೆ ವಂಚಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿ ಕೃಷ್ಣ ಜೆ. ರಾವ್ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲಾಗುವುದು. ಜ.24ರಂದು ಕಲ್ಲಡ್ಕದಲ್ಲಿ ಪ್ರತಿಭಟನಾರ್ಥಕವಾಗಿ ಮಗುವಿಗೆ ನಾಮಕರಣ ಶಾಸ್ತç ನಡೆಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು. 

ಮಂಗಳೂರಿನಲ್ಲಿ ಅವರು ಯುವತಿ, ಮಗು ಹಾಗೂ ಪೋಷಕರ ಜೊತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ಡಿಎನ್‌ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಪೂಜಾಳ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಸಾಬೀತಾದರೂ ಅವರು ಈಕೆಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಬದಲಾಗಿ 50 ಲಕ್ಷ ರೂ.ಗಳ ಪರಿಹಾರ ನೀಡಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಇದಕ್ಕೆ ಯುವತಿಯಾಗಲಿ ಆಕೆಯ ಕುಟುಂಬವಾಗಲಿ ಒಪ್ಪುವುದಿಲ್ಲ. ಅವರಿಗೆ ಬೆಂಬಲವಾಗಿ ಸಮಾಜದ ಎಲ್ಲಾ ವರ್ಗದ ಜನ ಅವರ ಜತೆಗಿದೆ ಎಂದರು.

ಕೃಷ್ಣ ಜೆ. ರಾವ್ ಯುವತಿ ಜತೆ ವಿವಾಹ ಆಗಿ ಆ ಮಗುವಿಗೆ ತಂದೆಯ ಸ್ಥಾನ  ನೀಡುವ ಆಶಾಭಾವನೆಯೊಂದಿಗೆ ಆತನಿಗೆ ಜಾಮೀನು ದೊರಕಿ ಆತ ಆರಾಮವಾಗಿ ಓಡಾಡಿಕೊಂಡಿದ್ದರೂ, ನಾವು ಈವರೆಗೆ ಸುಮ್ಮನಿದ್ದೆವು. ಆತನ ತಾಯಿ ನನ್ನ ಮೇಲೆ ಹಾಗೂ ಯುವತಿಯ ತಾಯಿ ಮೇಲೆ ಮಾನ ಹರಾಜು ಪ್ರಕರಣ ದಾಖಲಿಸಿದ್ದಾರೆ. ಆದರೆ ವಾಸ್ತವದಲ್ಲಿ ಇಲ್ಲಿ ಓರ್ವ ಯುವತಿ ಮತ್ತು ಆಕೆಯ ಕಟುಂಬದವರ ಮಾನ ಹರಾಜು ಹಾಕಲಾಗಿದೆ ಎಂದವರು ಹೇಳಿದರು.

ಕರಾವಳಿಯಲ್ಲಿ ಹಿಂದು ಸಮಾಜದ ಬಗ್ಗೆ ಮುಖಂಡರು, ರಾಜಕೀಯ ನೇತಾರರು ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆಯೇ ವಿನಃ ಇಂತಹ ಸನ್ನಿವೇಶದಲ್ಲಿ ಸಿಲುಕಿದವರನ್ನು ಪಾರು ಮಾಡುವ ಬಗ್ಗೆ ನೆರವಿಗೆ ಧಾವಿಸುತ್ತಿಲ್ಲ. ಹಾಗಾಗಿ ನಾವು ಬೇರೆ ಸಮುದಾಯದವರನ್ನೂ ಧ್ವನಿ ಎತ್ತಲು ಆಹ್ವಾನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿ ಕೇಂದ್ರ ಆಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ. ಇದೇ ಕಾರಣಕ್ಕೆ ಜ.24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.

ಮಗುವಿನ ತಂದೆ ಕೃಷ್ಣ ಜೆ.ರಾವ್ ಯಾವ ಕಾರಣಕ್ಕೆ ಪೂಜಾಳನ್ನು ತಿರಸ್ಕರಿಸುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಅರ್ಥಮಾಡಿಕೊಂಡಿದ್ದ ಇವರಿಬ್ಬರ ಸರಸದಲ್ಲಿ ಮಗು ಜನಿಸಿದ ಬಳಿಕ ಮತ್ತೆ ಆಕೆಯನ್ನು ದೂರ ಮಾಡುವುದರಲ್ಲಿ ಅರ್ಥ ಇಲ್ಲ. ಆಕೆ ಯಾವುದೇ ಕಾರಣಕ್ಕೂ ಅಬಲೆ ಅಲ್ಲ, ಆಕೆಯೂ ನಿತ್ಯವೂ ನೊಂದುಕೊಳ್ಳುತ್ತಿದ್ದು, ಆತ್ಮಹತ್ಯೆಗೂ ಯೋಚಿಸಿದ್ದಾಳೆ. ಅವಳ ಬದುಕಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು, ಮುಂದೆ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಪುತ್ತೂರಿನ ಅರುಣ್ ಕುಮಾರ್ ಪುತ್ತಿಲರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರು ಶ್ರೀನಿವಾಸ ದೇವರಿಗೆ ಕಲ್ಯಾಣ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಶ್ರೀನಿವಾಸ ದೇವರಿಗೆ ಯಾವಾಗಲೋ ಕಲ್ಯಾಣ ಆಗಿದೆ. ಈಗ ಆಗಬೇಕಾಗಿರುವುದು ಪೂಜಾಳಿಗೆ. ಅವಳಿಗೆ ಕೃಷ್ಣ ಜೆ.ರಾವ್ ಜೊತೆ ಕಲ್ಯಾಣ ಮಾಡಿಸುವ ಬಗ್ಗೆ ಪುತ್ತಿಲ ಮನಸ್ಸು ಮಾಡಲಿ. ಮದುವೆ ವಿಚಾರದಲ್ಲಿ ಸಂಧಾನ ಮಾತುಕತೆ ವೇಳೆ ಆತನ ಪೋಷಕರು ಈಡೇರಿಸಲಾಗದ ಷರತ್ತು ಇಟ್ಟಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು. ಹಾಗಾದರೆ ಮಾತ್ರ ಪೂಜಾಳವನ್ನು ಆತ ವಿವಾಹವಾಗಿ ವಿಚ್ಛೇದನ ನೀಡಲಾಗುವುದು. ಅಲ್ಲದೆ ಈ ವೇಳೆ 50 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಮೊದಲು ಆತನ ವಿರುದ್ಧದ ಎಲ್ಲಾ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದೆಲ್ಲಾ ಷರತ್ತುಗಳನ್ನು ವಿಧಿಸಲಾಗಿದೆ. ನಮಗೆ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ಆತ ಪೂಜಾಳನ್ನು ವಿವಾಹವಾಗಿ ಮನೆ ಅಳಿಯನಾದರೆ ನಾನೇ ಅವರಿಗೆ 50 ಲಕ್ಷ ರೂ. ಕೊಡುತ್ತೇನೆ ಎಂದು ಪ್ರತಿಭಾ ಕುಳಾಯಿ ಸವಾಲು ಹಾಕಿದರು.






Ads on article

Advertise in articles 1

advertising articles 2

Advertise under the article