ಶಿರೂರು ವೇದವರ್ಧನ ಶ್ರೀಗಳ ಪುರಪ್ರವೇಶಕ್ಕೆ ಕ್ಷಣಗಣನೆ (Video)
ಪೊಡವಿಗೊಡೆಯ ಶ್ರೀಕೃಷ್ಣನ ನಾಡು ಉಡುಪಿಯಲ್ಲಿ ಶಿರೂರು ಪರ್ಯಾಯದ ಸಂಭ್ರಮ ಕಳೆಗಟ್ಟಿದೆ. ಜ.9ರಂದು ಶಿರೂರು ಶ್ರೀಗಳ ಪುರಪ್ರವೇಶ ನಡೆಯಲಿದ್ದು, ಉಡುಪಿ ನಗರವಿಡೀ ಬಣ್ಣ ಮತ್ತು ವಿದ್ಯುತ್ ದೀಪದ ಅಲಂಕಾರದಿಂದ ಕಂಗೊಳಿಸುತ್ತಿದೆ.
ಜನವರಿ 18ರಂದು ನಡೆಯಲಿರುವ ಶಿರೂರು ಪರ್ಯಾಯದಲ್ಲಿ ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನೆಯ ಬಳಿಕ ಜ.9ರಂದು ಉಡುಪಿಗೆ ಆಗಮಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ಕಡಿಯಾಳಿ ಮೂಲಕ ಪುರಪ್ರವೇಶ ಮಾಡಲಿದ್ದಾರೆ.
ಶಿರೂರು ಮೂಲ ಮಠಕ್ಕೆ ಆಗಮಿಸಲಿದ್ದು, ಅಲ್ಲಿಂದ ಪಟ್ಟದ ದೇವರ ಸಮೇತ ಕಡಿಯಾಳಿಗೆ ಆಗಮಿಸಿ, ಶ್ರೀ ಮಹಿಷಮರ್ಧಿನಿಯ ದರ್ಶನ ಪಡೆದು ಭವ್ಯ ಶೋಭಾಯಾತ್ರೆಯಲ್ಲಿ ಪುರಪ್ರವೇಶ ಮಾಡಲಿದ್ದಾರೆ.
ಪುರಪ್ರವೇಶ ಮೆರವಣಿಗೆ ಕಡಿಯಾಳಿಯಿಂದ ಹೊರಟು ಸಿಟಿ ಬಸ್ ಸ್ಟ್ಯಾಂಡ್ ಹನುಮಾನ್ ವೃತ್ತ, ಕನಕದಾಸ ರಸ್ತೆ ಮೂಲಕ ಕೃಷ್ಣ ಮಠ ತಲುಪಲಿದೆ. 1000ಕ್ಕೂ ಅಧಿಕ ಭಜಕರು, ಉಡುಪಿಯ ಸ್ಥಳೀಯ ಜಾನಪದ ತಂಡಗಳು, ವಿವಿಧ ಕಲಾತಂಡ, ಸಾಂಸ್ಕೃತಿಕ ತಂಡಗಳು ಹಾಗೂ ವಿಶೇಷ ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಲಿವೆ.
ಶಿರೂರು ಶ್ರೀಗಳು ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಬಳಿಕ ವಿವಿಧ ದೇವರ ದರ್ಶನ ಪಡೆಯಲಿದ್ದಾರೆ. ಸಂಜೆ ರಥಬೀದಿಯಲ್ಲಿ ಹಾಕಲಾಗುವ ವೇದಿಕೆಯಲ್ಲಿ ಉಡುಪಿ ನಗರಸಭೆಯ ವತಿಯಿಂದ ಪೌರ ಸಮ್ಮಾನವನ್ನು ಸ್ವೀಕರಿಸಲಿದ್ದಾರೆ.
ಜ. 9ರಂದು ನಡೆಯಲಿರುವ ಶಿರೂರು ಶ್ರೀಗಳ ಪುರಪ್ರವೇಶಕ್ಕೆ ಎಲ್ಲಾ ರೀತಿಯ ತಯಾರಿ ನಡೆಸಿಕೊಳ್ಳಲಾಗುತ್ತಿದೆ. ನಗರದಾದ್ಯಂತ ಬ್ಯಾನರ್, ವಿದ್ಯುತ್ ದೀಪ ಅಳವಡಿಕೆ ನಡೆಯುತ್ತಿದೆ. ಶ್ರೀಕೃಷ್ಣ ಮಠ, ಶಿರೂರು ಮಠವನ್ನು ವಿದ್ಯುತ್ ದೀಪ, ಹೂವುಗಳಿಂದ ಅಲಂಕರಿಸಲಾಗಿದೆ. ಒಟ್ಟಿನಲ್ಲಿ ಶಿರೂರು ಪರ್ಯಾಯಕ್ಕೆ ಉಡುಪಿ ನಗರವೇ ಸಿಂಗಾರಗೊಂಡು ಶಿರೂರು ಶ್ರೀಗಳ ಪುರಪ್ರವೇಶಕ್ಕೆ ಕಾಯುತ್ತಿದೆ.