-->
ಬೃಹತ್ ಅಂತಾರಾಷ್ಟ್ರೀಯ ಆನ್‌ಲೈನ್ ಹೂಡಿಕೆ ವಂಚನೆ ಜಾಲ ಪತ್ತೆ; 11 ಮಂದಿಯ ಬಂಧನ

ಬೃಹತ್ ಅಂತಾರಾಷ್ಟ್ರೀಯ ಆನ್‌ಲೈನ್ ಹೂಡಿಕೆ ವಂಚನೆ ಜಾಲ ಪತ್ತೆ; 11 ಮಂದಿಯ ಬಂಧನ


ನೇಪಾಳದಲ್ಲಿ ನೆಲೆಸಿ ಭಾರತೀಯರನ್ನು ಗುರಿಯಾಗಿಸಿ ನೂರಾರು ಕೋಟಿ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ಆನ್‌ಲೈನ್ ಹೂಡಿಕೆ ವಂಚನೆ ಜಾಲವನ್ನು ಮಂಗಳೂರು ನಗರ ಸೆನ್ ಪೊಲೀಸರು ಭೇದಿಸಿದ್ದು, 11 ಜನ ಆರೋಪಿಗಳನ್ನು ಬಂಧಿಸಿದ್ದಾರೆ.


ಗುಜರಾತ್ ನಿವಾಸಿ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ ನ ಪುಪ್ಲ ಶಿವ ಕುಮಾರ್ ರಾವ್ (32),ಉತ್ತರ ಪ್ರದೇಶದ ಗೌರವ್ ಪಾಂಡೆ (24), ಸುಲ್ತಾನ್ ಪುರ್ ಜಿಲ್ಲೆ ಉತ್ತರ ಪ್ರದೇಶದ ಹರ್ಷ್ ಮಿಸ್ರಾ (22), ಜಾರ್ಖಂಡ್ ನ ರಾಜೇಶ್ ಮಂಡನ್ (30), ಉತ್ತರಪ್ರದೇಶದ ಮೊಹಮ್ಮದ್ ಆಕೀಬ್ ಅಲಿ (27), ಬಿಹಾರ ದ ರಾಜೀವ್ ರಂಜನ್ ಕುಮಾರ್ (30), ಜಾರ್ಖಂಡ್ ನ ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶ ದ ನೌಶಾದ್ ಅಲಿ (34), ರಾಜಸ್ಥಾನದ ಓಂ ಪ್ರಕಾಶ್ ಯಾಧವ್ (37) ಬಂಧಿತರು. 

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡುವುದಾಗಿ ನಂಬಿಸಿ ಬರೋಬ್ಬರಿ 1.38 ಕೋಟಿ ರೂಪಾಯಿ ವಂಚಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿದೆ. ಬಂಧಿತರೆಲ್ಲರೂ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು, ಈ ಜಾಲದ ಹಿಂದಿದ್ದ ಚೀನಾ ಮೂಲದ ಪ್ರಮುಖ ಆರೋಪಿಗಳನ್ನು ನೇಪಾಳ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆಯ ವೇಳೆ ಆರೋಪಿಗಳು ಬಳಸುತ್ತಿದ್ದ ಬರೋಬ್ಬರಿ 624 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಕೇವಲ ಒಂದೇ ಒಂದು ಖಾತೆಯಲ್ಲಿ 167 ಕೋಟಿ ರೂ. ವ್ಯವಹಾರ ನಡೆದಿರುವುದು ವಂಚನೆಯ ಭೀಕರತೆಯನ್ನು ತೋರಿಸುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

​ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ, ಬ್ಯಾಂಕ್ ಖಾತೆ ಒದಗಿಸಿದರೆ ಶೇ. 5 ರಿಂದ 10 ರಷ್ಟು ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿ ಅವರನ್ನು ನೇಪಾಳ, ದುಬೈಗೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರಿಂದ ಬ್ಯಾಂಕ್ ಖಾತೆ ಮತ್ತು ಸಿಮ್ ಕಾರ್ಡ್‌ಗಳನ್ನು ಪಡೆದು, ಸಾರ್ವಜನಿಕರಿಂದ ಲೂಟಿ ಮಾಡಿದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿಕೊಂಡು, ತಕ್ಷಣವೇ ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ (USDT) ಪರಿವರ್ತಿಸಿ ವಿದೇಶಗಳಿಗೆ ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣದಲ್ಲಿ ‘ಡಿಜಿಟಲ್ ಸ್ಲೇವರಿ’ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದ್ದು, ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಕರೆದೊಯ್ದು, ಪಾಸ್‌ಪೋರ್ಟ್ ಕಸಿದುಕೊಂಡು ಭಾರತೀಯ ಯುವಕರನ್ನೇ ಈ ವಂಚನೆ ಕೃತ್ಯಕ್ಕೆ ಬಲವಂತವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ.

Ads on article

Advertise in articles 1

advertising articles 2

Advertise under the article