ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ : ಅರೋಪಿಗಳಿಬ್ಬರಿಗೆ 5 ವರ್ಷ ಕಠಿಣ ಜೈಲು
ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಆಟೋರಿಕ್ಷಾವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಉಡುಪಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು ಆಟೋ ಚಾಲಕ ಸೇರಿ ಇಬ್ಬರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ಆರೋಪಿಗಳಾದ ಆಟೋ ಚಾಲಕ ಶರತ್ ಶೆಟ್ಟಿ (32) ಹಾಗೂ ಆತನ ಸ್ನೇಹಿತ ಪ್ರಶಾಂತ ನಾಯ್ಕ್ (28) ಇವರಿಗೆ ತಲಾ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಐದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ. ಜೊತೆಗೆ ನೊಂದ ಅಪ್ರಾಪ್ತ ಬಾಲಕಿಗೆ ಸರ್ಕಾರದ ವತಿಯಿಂದ ರೂ.50,000 ಪರಿಹಾರ ಧನ ನೀಡಲು ಸೂಚಿಸಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿ ಪ್ರತಿದಿನ ಆಟೋರಿಕ್ಷಾದ ಮೂಲಕ ಶಾಲೆಗೆ ತೆರಳಿ ಮರಳುತ್ತಿದ್ದಳು. 2025ರ ಜುಲೈ 15ರಂದು, ಶಾಲೆಯಿಂದ ಮನೆಗೆ ವಾಪಸಾಗುವ ವೇಳೆ ಆಟೋರಿಕ್ಷಾದಲ್ಲಿದ್ದ ಶರತ್ ಶೆಟ್ಟಿ ಹಾಗೂ ಪ್ರಶಾಂತ ನಾಯ್ಕ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಘಟನೆಯ ಬಳಿಕ ಬಾಲಕಿ ತನ್ನ ಶಾಲೆಯ ಶಿಕ್ಷಕರಿಗೆ ವಿಷಯ ತಿಳಿಸಿದ್ದು, ಶಿಕ್ಷಕರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕೇವಲ 15 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ, ಮಚ್ಚಟ್ಟು ಗ್ರಾಮದ ನಿವಾಸಿಗಳಾದ ಆರೋಪಿಗಳ ವಿರುದ್ಧ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 32 ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸುಮಾರು 7 ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ, ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ವಿಶೇಷ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು, ಜಯರಾಮ ಶೆಟ್ಟಿ ಹಾಗೂ ವೈ.ಟಿ. ರಾಘವೇಂದ್ರ ಅವರು ವಾದ ಮಂಡಿಸಿದ್ದರು.