ಐರೋಡಿಯಲ್ಲಿ 2 ದಿನ ಕುಡಿಯುವ ನೀರಿಲ್ಲದೆ ಜನ ತತ್ತರ; ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ
ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್‌ನಲ್ಲಿ ಕಳೆದ ಎರಡು ದಿನಗಳಿಂದ ಕುಡಿಯುವ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಗ್ರಾಮಸ್ಥರು ತೀವ್ರ ಅಸಮಾಧಾನಗೊಂಡು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಂಚಾಯಿತಿಯ ಪಂಪ್ ಆಪರೇಟರ್ ಮದ್ಯಪಾನ ಮಾಡಿಕೊಂಡು ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ನೀರನ್ನು ಬಿಡುತ್ತಿಲ್ಲ. ಈ ಕುರಿತು ಹಲವಾರು ಬಾರಿ ದೂರು ನೀಡಿದರೂ ಪಂಚಾಯಿತಿ ಆಡಳಿತ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ನೀರಿನ ಕೊರತೆಯಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ದಿನನಿತ್ಯದ ಅಗತ್ಯಗಳಿಗೂ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯ ಸ್ಥಳದಲ್ಲಿ ಮಾತನಾಡಿದ ಪಂಚಾಯಿತಿ ಸದಸ್ಯರಾದ ಶಿವರಾಮ ಶ್ರೀಯಾನ್ ಹಾಗೂ ನಟರಾಜ ಗಾಣಿಗ, ಪಂಪ್ ಆಪರೇಟರ್ ವಿರುದ್ಧ ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿಯೇ ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಗಿದೆ. ಆತನನ್ನು ವಜಾಗೊಳಿಸಿ ಹೊಸ ಆಪರೇಟರ್ ನೇಮಕ ಮಾಡುವ ತೀರ್ಮಾನ ಇದ್ದರೂ, ಪಿಡಿಒ ಅವರು ಅದನ್ನು ಜಾರಿಗೊಳಿಸದೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಸಲ್ಲಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯೊಬ್ಬರು ಮಾತನಾಡಿ, ನಮಗೆ ಕುಡಿಯುವುದಕ್ಕೂ ನೀರಿಲ್ಲ. ಬಾವಿಯ ನೀರು ಉಪ್ಪಾಗಿರುವುದರಿಂದ ಬಳಸಲು ಸಾಧ್ಯವಿಲ್ಲ. ಪಂಚಾಯಿತಿ ನೀರನ್ನೇ ನಂಬಿಕೊಂಡಿದ್ದೇವೆ. ಪ್ರತಿ ತಿಂಗಳು ಬಿಲ್ ವಸೂಲಿ ಮಾತ್ರ ಸಮಯಕ್ಕೆ ಸರಿಯಾಗಿ ಆಗುತ್ತದೆ. ಆದರೆ ನೀರು ಬಂದೇ ಬರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯಿತಿ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿ, ಪಂಪ್ ಆಪರೇಟರ್ ಮದ್ಯಪಾನ ಮಾಡಿಕೊಂಡು ಕೆಲಸಕ್ಕೆ ಬರುವುದು ಹಾಗೂ ನಿರಂತರ ಗೈರುಹಾಜರಿಯಿಂದ ಈ ಸಮಸ್ಯೆ ಉಂಟಾಗಿದೆ. ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಕುಟುಂಬಸ್ಥರು ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದರಿಂದ ಇದುವರೆಗೆ ಕಠಿಣ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇತ್ತೀಚೆಗೆ 15 ದಿನ ಕೆಲಸಕ್ಕೆ ಬಂದು, 15 ದಿನ ಗೈರುಹಾಜರಾಗುತ್ತಿರುವುದು ಕಂಡುಬಂದಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾತ್ಕಾಲಿಕವಾಗಿ ಬೇರೆ ಪಂಪ್ ಆಪರೇಟರ್‌ರನ್ನು ನೇಮಿಸಿ ಮಧ್ಯಾಹ್ನದೊಳಗೆ ನೀರು ಸರಬರಾಜು ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.