ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ
ಬೈಂದೂರಿನ ಮಾಜಿ ಶಾಸಕ, ಖ್ಯಾತ ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಶನಿವಾರ ಬೆಳಿಗ್ಗೆ ನಿಧನರಾದರು. 91 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ.
ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಪ್ಪಣ್ಣ ಹೆಗ್ಡೆ ಅವರ ನಿಧನದಿಂದ ಕುಂದಾಪುರ ಮಾತ್ರವಲ್ಲದೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಆಳವಾದ ಶೋಕದ ಛಾಯೆ ಆವರಿಸಿದೆ.
ಅಪ್ಪಣ್ಣ ಹೆಗ್ಡೆ ಅವರು 1960 ರಿಂದ 1983ರ ವರೆಗೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಬಳಿಕ 1983ರಿಂದ 1994ರವರೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಜನಸಂಪರ್ಕ, ಸರಳ ಜೀವನಶೈಲಿ ಹಾಗೂ ಜನಪರ ಕಾರ್ಯಗಳಿಂದ ಅವರು ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.
ರಾಜಕೀಯದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಅವರು ತಾಲೂಕು ಸಹಕಾರಿ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ, ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಬನ್ನೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾಗಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರಕ್ಕೂ ಅಪಾರ ಸೇವೆ ನೀಡಿದ್ದರು.
ಅವರ ನಿಧನಕ್ಕೆ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಸಂತಾಪ ಸೂಚಿಸಿದ್ದು, ಇದು ಸಾರ್ವಜನಿಕ ಜೀವನಕ್ಕೆ ತುಂಬಲಾರದ ನಷ್ಟವೆಂದು ಕಂಬನಿ ಮಿಡಿದಿದ್ದಾರೆ.
ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯ ವಿವರಗಳನ್ನು ಕುಟುಂಬದವರು ತಿಳಿಸುವುದಾಗಿ ತಿಳಿಸಿದ್ದಾರೆ.