-->
5 ರಾಜ್ಯಗಳ ಚುನಾವಣೆ; ಏ.9ರಿಂದ ಏ.29ರವರೆಗೂ ಮತದಾನ

5 ರಾಜ್ಯಗಳ ಚುನಾವಣೆ; ಏ.9ರಿಂದ ಏ.29ರವರೆಗೂ ಮತದಾನ


ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಿಂದ 29ರವರೆಗೂ ಮತದಾನ ನಡೆಯಲಿದೆ.

 ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ದಿನಾಂಕಗಳನ್ನು ಪ್ರಕಟಿಸಿದರು. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರುತ್ತದೆ.

ಅಸ್ಸಾಮ್, ಕೇರಳ ಮತ್ತು ಪುದುಚೆರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ. ತಮಿಳುನಾಡಿನಲ್ಲೂ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಬಹಳಷ್ಟು ಜಾಗಗಳು ಹಿಂಸಾಚಾರಗಳಿಗೆ ಸೂಕ್ಷ್ಮವಾಗಿರುವುದರಿಂದ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತದೆ. ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಈ ಮೇಲಿನ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಯಲ್ಲಿ ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಐದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 824 ಕ್ಷೇತ್ರಗಳಲ್ಲಿ 17.4 ಕೋಟಿ ಮತದಾರರಿದ್ದಾರೆ. 2.19 ಲಕ್ಷ ಪೋಲಿಂಗ್ ಸ್ಟೇಷನ್​ಗಳಿವೆ. 25 ಲಕ್ಷ ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.

ಕರ್ನಾಟಕ ಸೇರಿ ಆರು ರಾಜ್ಯಗಳಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳೂ ನಡೆಯಲಿವೆ. ಕರ್ನಾಟಕ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಗೋವಾ ರಾಜ್ಯಗಳಲ್ಲಿನ ಐದು ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪಚುನಾವಣೆಯಾಗುತ್ತದೆ. ಉಳಿದ ರಾಜ್ಯಗಳಲ್ಲಿನ ಉಪಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ.

ಮೇ 4ರಂದು ಎಲ್ಲಾ ವಿಧಾನಸಭಾ ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಅಂದೇ ಬಹುತೇಕ ಎಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.

Ads on article

Advertise in articles 1

advertising articles 2

Advertise under the article