ಉಡುಪಿ ಸಮಾನ ಮನಸ್ಕ ಸಂಘಟನೆಗಳಿಂದ ಯುದ್ಧ ವಿರೋಧಿ ದಿನಾಚರಣೆ
ಜಗತ್ತಿನ ಎಲ್ಲಾ ದೇಶಗಳ ಮೇಲೆ ಹಿಡಿತ ಸಾಧಿಸಲು ಪೈಶಾಚಿಕ ದಾಳಿ ನಡೆಸುತ್ತಿರುವ ಅಮೇರಿಕಾ ಜಗತ್ತಿನ ಸಾಮ್ರಾಜ್ಯಶಾಹಿ ಟ್ರಂಪ್ ಕೊಲೆಗಡುಕ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ದೇಶದಾದ್ಯಂತ ಕಾರ್ಮಿಕ ಸಂಘಟನೆ ಸಿಐಟಿಯು ಇತರೆ ಸಂಘಟನೆಗಳು ಕರೆ ನೀಡಿದ ವಿಶ್ವ ಶಾಂತಿಗಾಗಿ ಯುದ್ಧ ವಿರೋಧಿ ದಿನಾಚರಣೆ ಅಂಗವಾಗಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸಿಐಟಿಯು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿಎಸ್‌ಎಸ್ (ಅಂಬೇಡ್ಕರ್ ವಾದ) ಸಹಬಾಳ್ವೆ ಉಡುಪಿ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಿಟೀಷ್ ವಸಾಹತುಶಾಹಿಯ ರೀತಿಯಲ್ಲಿಯೇ ಇಂದು ಯು ಎಸ್ ಸಾಮ್ರಾಜ್ಯಶಾಹಿ ಭಾರತದ ನೀತಿ ನಿಯಮಗಳನ್ನು ರೂಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂದು ಕೊಲೆಗಡುಕ ಅಮೇರಿಕಾವು 140 ಕೋಟಿ ಜನರ ಮೇಲೆ ಅಧಿಕಾರ ಚಲಾಯಿಸುತ್ತಿದ್ದರೂ ನಮ್ಮ ದೇಶದ ಸರ್ಕಾರ ಡೊಗ್ಗು ಸಲಾಮು ಹೊಡೆದು ಸಾಮ್ರಾಜ್ಯಶಾಹಿಯನ್ನು ಬೆಂಬಲಿಸುತ್ತಿದೆ. ಮುಂದೆ ಇದು ಭಾರತಕ್ಕೂ ಆಪತ್ತು ತರಲಿದೆ ಎಂದು ಹೇಳಿದರು. ಕ್ಯೂಬಾದ ಮೇಲೆ ನಿರ್ಬಂಧ ಹೇರಿ ಅಲ್ಲಿನ ಜನರಿಗೆ ಆಹಾರ ಸಿಗದಂತೆ ಮಾಡಿದರೂ ಆ ಪುಟ್ಟ ದೇಶ ಸಾಮ್ರಾಜ್ಯಶಾಹಿ ವಿರುದ್ಧ ಸೆಟೆದು ನಿಂತಿದೆ. ವೆನೆಜುವೆಲಾದ ಅಧ್ಯಕ್ಷರ ಅಪಹರಣ, ಉಕ್ರೇನ್ ಬಳಸಿ ರಷ್ಯಾದ ಮೇಲೆ ಆಕ್ರಮಣ, ಇಸ್ರೇಲ್ ಬಳಸಿ ಪ್ಯಾಲೇಷ್ಟೇನ್ ಜನರ ನರಮೇಧ ಈಗ ತೈಲ ಸಂಪತ್ತು ವಶಪಡಿಸಿಕೊಳ್ಳಲು ಇರಾನ್ ಮೇಲೆ ಆಕ್ರಮಣ ಮಾಡಿ ಶಾಲೆಗಳ ಮೇಲೆ ಆಕ್ರಮಣ ಮಾಡಿ ಮಕ್ಕಳನ್ನು ಹಾಗೂ ಇರಾನ್ ಪರಮೋಚ್ಚ ನಾಯಕನನ್ನೇ ಕೊಂದಿದೆ. ಆದ್ದರಿಂದ ಅಮೇರಿಕಾದ ಅಧ್ಯಕ್ಷನನ್ನು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಬಂಧಿಸಬೇಕು. ಯುದ್ಧ ಕೊನೆಯಾಗಬೇಕು ಎಂದು ಅವರು ಹೇಳಿದರು.
ಈ ವೇಳೆಯಲ್ಲಿ ಅಮೇರಿಕಾದ ನೀತಿ ಖಂಡಿಸಿ ಸಹಬಾಳ್ವೆ ಇದ್ರೀಸ್ ಹೂಡೆ ಮಾತನಾಡಿ, ಅಮೇರಿಕಾ ತನ್ನ ಸ್ವಾರ್ಥಕ್ಕಾಗಿ ಸುಳ್ಳು ನೆಪಗಳನ್ನು ಮುಂದು ಮಾಡಿ ಹಲವು ರಾಷ್ಟ್ರಗಳಲ್ಲಿ ಪೈಶಾಚಿಕ ಕೃತ್ಯ ನಡೆಸಿ ಜನರನ್ನು ನಿರ್ಧಯವಾಗಿ ಮಹಿಳೆಯರು ಮಕ್ಕಳನ್ನೂ ಕೊಂದಿದೆ ಇದು ಇಂದೂ ಮುಂದುವರಿದಿದೆ ಇದನ್ನು ಎಲ್ಲಾ ಪ್ರಜ್ಞಾವಂತರು ಖಂಡಿಸಬೇಕು ಎಂದು ಹೇಳಿದರು.
ಡಿಎಸ್ ಎಸ್ ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಸುಂದರ್ ಮಾಸ್ತರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ವಿ, ಕವಿರಾಜ್ ಎಸ್ ಕಾಂಚನ್ ಮಾತನಾಡಿದರು. ಸಿಐಟಿಯು ಸಂಘಟನೆಯ ಎಚ್ ನರಸಿಂಹ, ಉಮೇಶ್ ಕುಂದರ್, ನಳಿನಿ, ಮೋಹನ್
ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ಸಾಲಿಡಾರಿಟಿ ಸಂಘಟನೆಯ ಅಪ್ವಾನ್, ಡಿಎಸ್‌ಎಸ್ ಸಂಘಟನೆಯ ಮಂಜುನಾಥ್ ಗಿಳಿಯಾರ್ ಮೊದಲಾದವರಿದ್ದರು.