ಎಲ್‌ಪಿಜಿ ದರ ಏರಿಕೆ ವಿರುದ್ಧ ಕಾಂಗ್ರೆಸ್ ಧರಣಿ; ರಸ್ತೆ ಮಧ್ಯೆ ಒಲೆ ಉರಿಸಿ ಚಹಾ ಮಾಡಿ ಆಕ್ರೋಶ(Video)
Tuesday, March 10, 2026
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏಕಾಏಕಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಬ್ರಹ್ಮಗಿರಿ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿತು.
ರಸ್ತೆ ಮಧ್ಯೆ ಕಟ್ಟಿಗೆ ಬಳಸಿ ಒಲೆ ಉರಿಸಿ ಚಹಾ ಮಾಡುವ ಮೂಲಕ ಪ್ರತಿಭಟಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬಡ ವರ್ಗ, ಕಾರ್ಮಿಕ ವರ್ಗ ಹಾಗೂ ಮಹಿಳೆಯರಿಗೆ ಕೇಂದ್ರ ಸರ್ಕಾರವು ದ್ರೋಹ ಎಸಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 11 ವರ್ಷಗಳಿಂದ ಬಡ ವರ್ಗದ ಜನರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ ಗಫೂರ್ ಮಾತನಾಡಿ, ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಮಹಿಳೆಯರ ಮೇಲೆ ಪ್ರಹಾರ ಮಾಡಿದೆ. ಹೋಟೆಲ್ ಉದ್ದಿಮೆಗೂ ಹೊಡೆತ ಬಿದ್ದಿದೆ. ಹಾಗಾಗಿ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಹಿಳಾ ಕಾಂಗ್ರೆಸ್ ಮುಖಂಡೆ ವೆರೊನಿಕಾ ಕರ್ನೆಲಿಯೋ ಮಾತನಾಡಿ, ಬಿಜೆಪಿ ಸರ್ಕಾರವು ಕ್ರೂಡ್ ಆಯಿಲ್ ಬೆಲೆ ಏರಿಕೆಯಾಗದೆ ಇದ್ದರೂ ಬೆಲೆ ಏರಿಸಿದ್ದಾರೆ ರಾಜ್ಯಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಜನ ಸಂಕಷ್ಟಕ್ಕೆ ಸ್ಪಂಧಿಸಿದರೆ ಕೇಂದ್ರ ಸರ್ಕಾರ, ಟ್ಯಾಕ್ಸ್, ಜಿಎಸ್ಟಿ ಹಾಕುವ ಮೂಲಕ ಜನರಿಗೆ ಹೊರೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲೆವೂರು ಹರೀಶ್ ಕಿಣಿ, ದಿನೇಶ್ ಹೆಗ್ಡೆ ಮಳಹಳ್ಳಿ, ಮಹಿಳಾ ಕಾಂಗ್ರೆಸ್ ಮುಖಂಡೆ ಜ್ಯೋತಿ ಹೆಬ್ಬಾರ್ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

