ಮನೆಯಿಂದ ಚಿನ್ನಾಭರಣ ಕಳ್ಳತನ ಪ್ರಕರಣ; ಆರೋಪಿಯ ಬಂಧನ
ಕಾವೂರು ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು 4 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಸಜಿಪನಡು ದೇರಾಜೆಯ ಅಶೋಕ್ (41) ಬಂಧಿತ ಆರೋಪಿ.
ಆರೋಪಿ ಕಳವು ಮಾಡಿದ ಎಲ್ಲಾ ಸ್ವತ್ತುಗಳ ವಶಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ನಗರ ಪೊಲೀಸರ ಪ್ರಕಟನೆ ತಿಳಿಸಿದೆ. ಕಾವೂರು ಉಲ್ಲಾಸ್ ನಗರ ಮನೆಯೊಂದಕ್ಕೆ ಮಾ.7ರಂದು ಮದ್ಯಾಹ್ನ 12-00 ಗಂಟೆ ಅವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿ ಸುಮಾರು ರೂ 4,80,000 ಬೆಲೆಯ 39 ಗ್ರಾಂ ಚಿನ್ನಭಾರಣ, 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಳ್ಳತನ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ ಕಳವು ಮಾಡಿರುವ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಈ ಪತ್ತೆ ಕಾರ್ಯಚಾರಣೆಯಲ್ಲಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ದಿನೇಶ್, ಮಾಲತೇಶ್, ನಾಗರಾಜ್ ಹಾಗೂ ರಿಯಾಜ್ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.