-->
 ಲಂಡನ್ ಮಹಿಳೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ

ಲಂಡನ್ ಮಹಿಳೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ


ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಉಡುಪಿಯ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. 

ಕುತ್ಪಾಡಿ ನಿವಾಸಿ ಹಾಗೂ ಮಂಗಳೂರಿನ ಹೋಟೆಲ್‌ನಲ್ಲಿ ಶೆಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಾಂಡು ಕರಿಯಪ್ಪ ಪೂಜಾರಿ (62) ವಂಚನೆಗೊಳಗಾದವರು.

ಪಾಂಡು ಅವರಿಗೆ ವಾಟ್ಸಾಪ್ ಮೂಲಕ ಏಮಿಲ್ಡಾ ವಿಲಿಯಂ ಎಂಬ ಹೆಸರಿನ ಮಹಿಳೆ ಪರಿಚಯವಾಗಿ, ತಾನು ಲಂಡನ್ ನಿವಾಸಿ ಎಂದು ನಂಬಿಸಿದ್ದಳು. ಭಾರತದಲ್ಲಿ ಕಾಸ್ಮೆಟಿಕ್ ಮತ್ತು ಹೋಟೆಲ್ ವ್ಯವಹಾರ ನಡೆಸುವುದಾಗಿ ತಿಳಿಸಿದ್ದ ಆಕೆ, ನಿಮ್ಮನ್ನು ಭೇಟಿಯಾಗಲು ಮಂಗಳೂರಿಗೆ ಬರುವುದಾಗಿ ಹೇಳಿದ್ದಳು. ಏಪ್ರಿಲ್ 7ರಂದು ಲಂಡನ್‌ನಿಂದ ದೆಹಲಿಗೆ ಬರುತ್ತಿರುವುದಾಗಿ ವಿಮಾನದ ಟಿಕೆಟ್ ಪ್ರತಿಯನ್ನು ಕಳುಹಿಸಿ ವಿಶ್ವಾಸ ಗಳಿಸಿದ್ದಳು.

ಏಪ್ರಿಲ್ 8ರಂದು ಬೆಳಿಗ್ಗೆ ಪಾಂಡು ಅವರಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ, ನಿಮ್ಮ ಸ್ನೇಹಿತೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅವರ ಬಳಿ 5 ಕೋಟಿ ರೂ. ಮೌಲ್ಯದ ಡಿಮಾಂಡ್ ಡ್ರಾಫ್ಟ್ ಹಾಗೂ ದುಬಾರಿ ವಸ್ತುಗಳಿವೆ. ಅವುಗಳನ್ನು ಬಿಡಿಸಿಕೊಳ್ಳಲು ತಕ್ಷಣ 70,000 ರೂ. ಪಾವತಿಸಬೇಕು ಎಂದು ತಿಳಿಸಿದ್ದಾಳೆ.

ಇದನ್ನು ನಂಬಿದ ಪಾಂಡು ಅವರು ವಿವಿಧ ಹಂತಗಳಲ್ಲಿ ತಮ್ಮ ಹಾಗೂ ಸಂಬಂಧಿಯ ಖಾತೆಗಳ ಮೂಲಕ ಸ್ಕ್ಯಾನರ್ ಬಳಸಿ ಒಟ್ಟು 1,13,300 ರೂ. ಹಣವನ್ನು ವರ್ಗಾಯಿಸಿದ್ದಾರೆ. ನಂತರ ಮತ್ತಷ್ಟು ಹಣದ ಬೇಡಿಕೆ ಬಂದಾಗ ತಾವು ವಂಚನೆಗೆ ಒಳಗಾಗಿರುವುದು ಅವರಿಗೆ ತಿಳಿದುಬಂದಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ  ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article