ಹಿಂದೂ ಮಹಿಳೆಗೆ ನ್ಯಾಯ ಕೊಡಿಸಲು ಬಂದ ಮುಸ್ಲಿಂ ಮಹಿಳೆಯರು ನೆರೆಮನೆಯವರಲ್ಲ.. ಒಬ್ಬಾಕೆ ಪುತ್ರಿ ..!
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಒಂಟಿ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿಗೆ ಬಂದಿದ್ದ ಮುಸ್ಲಿಂ ಮಹಿಳೆಯರಲ್ಲಿ ಒಬ್ಬಾಕೆಯು ಇದೀಗ ಆಕೆಯ ಪುತ್ರಿಯೇ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಅವರು ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. 1989ರಲ್ಲಿ ಭೂರಹಿತರಿಗೆ ನೀಡುವ ವಸತಿ ನಿವೇಶನ ಯೋಜನೆಯಡಿ ಅವರಿಗೆ 5 ಸೆಂಟ್ಸ್ ಜಾಗ ಮಂಜೂರಾಗಿತ್ತು. ಹಕ್ಕುಪತ್ರವೂ ನೀಡಲಾಗಿತ್ತು.
ಆದರೆ ಆ ಜಾಗ ರಕ್ಷಿತ ಅರಣ್ಯ ವ್ಯಾಪ್ತಿಗೆ ಸೇರಿದೆ ಎಂಬ ಕಾರಣ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳು ಭೂ ಸ್ವಾಧೀನ ನೀಡಲು ನಿರಾಕರಿಸಿದ್ದಾರೆ. ಇದರಿಂದ ಗಿರಿಜಾ ಶೆಟ್ಟಿಗಾರ್ ಅವರಿಗೆ ಮನೆ ನಿರ್ಮಿಸಲು ಸಾಧ್ಯವಾಗದೆ, ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಡ ಮಹಿಳೆಯಾಗಿದ್ದರಿಂದ ಭೂಮಿಯ ವಾಸ್ತವ್ಯ ಸಿಗದೇ ಮನೆಯನ್ನೂ ಕಟ್ಟಲಾಗದೇ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಭೂಮಿಯ ಹಕ್ಕು ಪಡೆಯಲು ಗಿರಿಜಾ ಶೆಟ್ಟಿಗಾರ್ ಅವರು ಅನೇಕ ಬಾರಿ ವಿವಿಧ ಸರ್ಕಾರಿ ಕಚೇರಿಗಳಿಗೆ ತೆರಳಿದ್ದಾರೆ. ನೆರೆಮನೆಯ ಸಲಹುದ್ದೀನ್ ಕುಟುಂಬ ಸಹ ಅವರಿಗೆ ನೆರವಾಗಿದ್ದು, ಅಧಿಕಾರಿಗಳ ಬಳಿ ಕರೆದೊಯ್ದಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ.
ಇತ್ತೀಚೆಗೆ ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಲು ಗಿರಿಜಾ ಶೆಟ್ಟಿಗಾರ್ ಅವರನ್ನು ಇಬ್ಬರು ಮುಸ್ಲಿಂ ಮಹಿಳೆಯರು ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಸಚಿವರು ಸಾಮಾಜಿಕ ಸೌಹಾರ್ದದ ಉದಾಹರಣೆಯಾಗಿ ಈ ಘಟನೆಯನ್ನು ಉಲ್ಲೇಖಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಬರಹ ಹಂಚಿಕೊಂಡಿದ್ದರು.
ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಈ ಮುಸ್ಲಿಂ ಸಹೋದರಿಯರ ಕಾಳಜಿಯನ್ನು ಕಂಡು “ಇದು ನೋಡಿ ನಮ್ಮ ಹೆಮ್ಮೆಯ ಭಾರತ” ಎಂದು ನನಗೆ ಹೆಮ್ಮೆ ಎನಿಸಿತು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
‘ಮುಸ್ಲಿಂ ಮಹಿಳೆ’ ಎಂದವರಲ್ಲಿ ಒಬ್ಬರು ಗಿರಿಜಾ ಪುತ್ರಿ
ಗಿರಿಜಾ ಶೆಟ್ಟಿಗಾರ್ ಅವರ ಪರ ನ್ಯಾಯ ಕೇಳಿಕೊಂಡು ಬಂದವರು ನೆರೆಮನೆಯ ಮುಸ್ಲಿಂ ಮಹಿಳೆಯರಲ್ಲ. ಗಿರಿಜಾ ಶೆಟ್ಟಿಗಾರ್ ಪರವಾಗಿ ಕಣ್ಣೀರು ಹಾಕಿ ನ್ಯಾಯ ಕೇಳಿದ ಮಹಿಳೆಯರಲ್ಲಿ ಒಬ್ಬರು ಅವರ ಪುತ್ರಿಯೇ ಆಗಿದ್ದಾರೆ. ಅವರು ಸುಮಾರು ಎರಡು ದಶಕಗಳ ಹಿಂದೆ ಸಲಹುದ್ದೀನ್ ಅವರನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ತಿಳಿದು ಬಂದಿದೆ. ಇನ್ನೊಬ್ಬ ಮಹಿಳೆ ಗಿರಿಜಾ ಅವರ ಸಂಬಂಧಿ ಎಂದು ಹೇಳಲಾಗಿದೆ. ಗಿರಿಜಾ ಶೆಟ್ಟಿಗಾರ್ ಅವರ ಮಗಖು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರೂ ತಾಯಿಯೊಂದಿಗಿನ ಸಂಬಂಧ ಕಡಿದುಕೊಳ್ಳದೇ ಸಂಕಷ್ಟದಲ್ಲಿರುವ ತಾಯಿಗೆ ನೆರವಿಗೆ ಬಂದಿದ್ದರು ಎನ್ನುವುದು ಬಹಿರಂಗವಾಗಿದೆ.