ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ: ಬಿಜೆಪಿ ಶಾಸಕರ ಆರೋಪ, ಹೆಬ್ಬಾಳ್ಕರ್ ಗರಂ
Saturday, May 16, 2026
ಉಡುಪಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ಎಂದು ಜಿಲ್ಲೆಯ ಬಿಜೆಪಿ ಶಾಸಕರು ಆರೋಪಿಸಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕಾರ್ಕಳ ಶಾಸಕ ಸುನಿಲ್ ಕುಮಾರ್, ಉಡುಪಿ ಶಾಸಕ ಯಶ್ನಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಅವರು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕು ಪತ್ರ ವಿತರಣೆಯಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳಾದ ಶಾಸಕರನ್ನು ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ತಮ್ಮ ಕ್ಷೇತ್ರದ ಹಕ್ಕುಪತ್ರವನ್ನು ಬೇರೆ ಯಾರೋ ವಿತರಣೆ ಮಾಡುತ್ತಿದ್ದಾರೆ ಎಂದು ಫೋಟೋ ಪ್ರದರ್ಶಿಸಿದರು. ಇದೇ ವೇಳೆ, ರಂಗಾಯಣ ಪ್ರಕಟಿಸಿದ ಪುಸ್ತಕದಲ್ಲಿ ಉಸ್ತುವಾರಿ ಸಚಿವೆ ಮತ್ತು ಸಂಸದರ ಭಾವಚಿತ್ರವನ್ನು ಪ್ರಕಟಿಸದೇ ಶಿಷ್ಟಾಚಾರ ಲೋಪ ಎಸಗಲಾಗಿದೆ ಎಂಬ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಅಧಿಕಾರಿಗಳ ನಡೆಗೆ ಅಸಮಾಧಾನಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗರಂ ಆಗಿ, ಕಾರ್ಕಳ ತಹಶೀಲ್ದಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿದರು.
