ಕೊಡವೂರು ಮಹಾರುದ್ರ ಯಾಗ: ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
Monday, May 18, 2026
ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗದ ಪ್ರಯುಕ್ತ ಬೃಹತ್ ಉದ್ಯೋಗ ಮೇಳಕ್ಕೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಉದ್ಯೋಗ ಮೇಳವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಜೊತೆ ಪ್ರಸಾದ್‌ರಾಜ್ ಕಾಂಚನ್ ಯುವಜನತೆಗೆ ಅನುಕೂಲವಾಗುವ ಕಾರ್ಯ ಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ನಮ್ಮ ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಶೇ.40ರಷ್ಟು 25ವರ್ಷ ಕೆಳಗಿನ ಯುವ ಜನತೆ ಇದ್ದಾರೆ. ಇವರೇ ನಮ್ಮ ದೇಶದ ಆಸ್ತಿಯಾಗಿದ್ದಾರೆ. ಇವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆ ಉದ್ಯೋಗ ಕೂಡ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.ಉತ್ತಮ ಉದ್ಯೋಗ ಸಿಕ್ಕಿದರೆ ಯುವಜನತೆಯ ಭವಿಷ್ಯ ಕೂಡ ಉತ್ತಮ ವಾಗಿರಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಶೇ.70ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವುದರಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಲಿಂಗ ಸಮಾನತೆ ಸಾಧಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಯುವಜನತೆ ಸರಿಯಾದ ಉದ್ಯೋಗ ಸಿಗದೆ ಹೊರರಾಜ್ಯ, ಹೊರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿನ ಪ್ರತಿಭೆಗಳಿಗೆ ನಮ್ಮಲ್ಲಿಯೇ ಉದ್ಯೋಗ ನೀಡುವುದರಿಂದ ನಮ್ಮ ಜಿಲ್ಲೆ ಆರ್ಥಿಕವಾಗಿ ಮತ್ತಷ್ಟು ಪ್ರಗತಿ ಸಾಧಿಸುತ್ತದೆ. ಈ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.ಉದ್ಯೋಗಾವಾಶಗಳ ಜೊತೆಗೆ ಸ್ಥಳೀಯವಾಗಿ ಬೇಡಿಕೆ ಇರುವ ಉದ್ಯಮ ಗಳ ಬಗ್ಗೆಯೂ ಯುವಜನತೆಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತದೆ. ಕರಾವಳಿಯಲ್ಲಿ ಇದೀಗ ಪ್ರವಾಸೋದ್ಯಮ ಕ್ಷೇತ್ರ ತುಂಬಾ ವೇಗವಾಗಿ ಬೆಳೆಯುತ್ತಿದೆ. ಇದರಲ್ಲಿ ವಿಫುಲ ಅವಕಾಶ ಕೂಡ ಇದೆ. ಇದನ್ನು ನಮ್ಮ ಸ್ಥಳೀಯ ಯುವಜನತೆ ಬಳಸಿಕೊಂಡು ಅಭಿವೃದ್ಧಿ ಕಾಣಬೇಕು ಎಂದು ಅವರು ತಿಳಿಸಿದರು
ಶ್ರೀನಿವಾಸ್ ಯೂನಿವರ್ಸಿಟಿ ಇದರ ಇಂಟರ್‌ನ್ಯಾಷನಲ್ ಕೊಲಾಬರೇಷನ್ಸ್ ನಿರ್ದೇಶಕಿ ಡಾ.ದಿವ್ಯಾರಾಣಿ ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಉದ್ಯೋಗ ಮೇಳ ಪ್ರಸಾದ್‌ರಾಜ್ ಕಾಂಚನ್ ಅವರ ಕನಸು ಆಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರಿಗೆ ಉದ್ಯೋಗ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಇದರಲ್ಲಿ 70 ಕಂಪೆನಿಗಳು ಭಾಗವಹಿಸಿದ್ದು, ಸುಮಾರು 7000ಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಇದರಲ್ಲಿ ಸಂಜೆಯವರೆಗೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನ ಅಧ್ಯಕ್ಷ ಹರಿಪ್ರಸಾದ್ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.


